Menu

ಕುಡ್ಲದ ಶ್ವೇತಾ ಕೋಟ್ಯಾನ್‌ಗೆ ‘ಫೈರ್ ಎಲಿಮೆಂಟ್ ವಿನ್ನರ್’ ಕಿರೀಟ!

ಉದಯಕಾಲ ನ್ಯೂಸ್, ಮಂಗಳೂರು: ಕೌಟುಂಬಿಕ ಜವಾಬ್ದಾರಿ ಹಾಗೂ ವೃತ್ತಿ ಬದುಕಿನ ಜಂಜಾಟದ ನಡುವೆ ಹೆಣ್ಣೊಬ್ಬಳ ಕನಸುಗಳು ಕಮರಿಹೋಗದು ಎಂಬುದನ್ನು ಸಾಬೀತುಪಡಿಸಿರುವ ಕರಾವಳಿಯ ಹೆಮ್ಮೆಯ ಮಗಳು ಶ್ವೇತಾ ಕೋಟ್ಯಾನ್, ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಇತಿಹಾಸ ಬರೆದಿದ್ದಾರೆ. ರಾಜಸ್ಥಾನದ ಐತಿಹಾಸಿಕ ರಜಪೂತಾನ ಪ್ಯಾಲೇಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಹೌಟ್ ಮಾಂಡ್ ಮಿಸಸ್ ಇಂಡಿಯಾ ವರ್ಲ್ಡ್‌ವೈಡ್ – 2026’ ಸ್ಪರ್ಧೆಯಲ್ಲಿ ಅವರು ‘ಫೈರ್ ಎಲಿಮೆಂಟ್ ವಿನ್ನರ್’ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ತುಳುನಾಡಿನ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಾರಿಸಿದ್ದಾರೆ.

ಕರಾವಳಿಯ ಸಂಸ್ಕೃತಿ ಬಿಂಬಿಸಿದ ರಾಷ್ಟ್ರೀಯ ಉಡುಗೆ

ರಾಜಸ್ಥಾನದ ನೀಮ್ರಾಣಾದಲ್ಲಿ ಅಕ್ಟೋಬರ್ 27ರಿಂದ 30ರವರೆಗೆ ನಡೆದ ನಾಲ್ಕು ದಿನಗಳ ಈ ಮ್ಯಾರಥಾನ್ ಸ್ಪರ್ಧೆಯಲ್ಲಿ ಸಿಂಗಾಪುರ, ಮಧ್ಯಪ್ರಾಚ್ಯ ಹಾಗೂ ಭಾರತ ಸೇರಿದಂತೆ ವಿವಿಧ ವಲಯಗಳ 16ಕ್ಕೂ ಹೆಚ್ಚು ಅತ್ಯುತ್ತಮ ಸ್ಪರ್ಧಿಗಳು ಭಾಗವಹಿಸಿದ್ದರು. ಗ್ರೂಮಿಂಗ್, ಪರ್ಸನಾಲಿಟಿ ಡೆವಲಪ್‌ಮೆಂಟ್, ಫೋಟೋಶೂಟ್ ಹಾಗೂ ಟ್ಯಾಲೆಂಟ್ ರೌಂಡ್‌ಗಳು ಬಹಳ ರೋಚಕವಾಗಿ ನಡೆದವು.

ವಿಶೇಷವಾಗಿ ಫಿನಾಲೆಯ ‘ನ್ಯಾಷನಲ್ ಕಾಸ್ಟ್ಯೂಮ್ ರೌಂಡ್’ನಲ್ಲಿ ಶ್ವೇತಾ ಪ್ರದರ್ಶಿಸಿದ ಉಡುಗೆ ನೋಡುಗರನ್ನು ದಂಗುಬಡಿಸಿತು. ಶ್ವೇತಾ ಅವರ ಮಗಳು ವಿನ್ಯಾಸಗೊಳಿಸಿದ ಕಲ್ಪನೆಗೆ ಖ್ಯಾತ ವಿನ್ಯಾಸಕಿ ಶ್ರೀಲಕ್ಷ್ಮಿ (ಶ್ರೀಲಕ್ಷ್ಮಿ ಪಿಕ್ಸಿ ಫ್ಯಾಬ್) ಜೀವ ತುಂಬಿದ್ದರು. ತುಳುನಾಡಿನ ಹೆಮ್ಮೆಯ ಯಕ್ಷಗಾನ, ಪಿಲಿವೇಷ (ಹುಲಿವೇಷ) ಹಾಗೂ ಅರಬ್ಬಿ ಸಮುದ್ರದ ಸೊಬಗನ್ನು ಏಕಕಾಲಕ್ಕೆ ಮೇಳೈಸಿದ ಆ ಅದ್ಭುತ ವಸ್ತ್ರವಿನ್ಯಾಸ ಕರಾವಳಿಯ ಪಾರಂಪರಿಕ ಶ್ರೀಮಂತಿಕೆಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಸಾರಿತು.

ಬಹುಮುಖ ಪ್ರತಿಭೆ ಹಾಗೂ ಯಶಸ್ವಿ ಉದ್ಯಮಿಯಾಗಿ ಶ್ವೇತಾ ಸಾಧನೆ

ಮೂಲತಃ ಮಂಗಳೂರಿನವರಾದ ಶ್ವೇತಾ ಕೋಟ್ಯಾನ್, ಪ್ರಸ್ತುತ ಓಮನ್‌ನ ಮಸ್ಕತ್‌ನಲ್ಲಿ ನೆಲೆಸಿದ್ದಾರೆ.

ಅಲ್ಲಿ ‘ಔರಾ ಇಂಟರ್‌ನ್ಯಾಷನಲ್’ ಈವೆಂಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವುದರ ಜೊತೆಗೆ ನಿರೂಪಕಿ ಮತ್ತು ನಟಿಯಾಗಿಯೂ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಈ ಹಿಂದೆ 2019ರಲ್ಲಿ ‘ಮಿಸಸ್ ಮಂಗಳೂರು’, 2020ರಲ್ಲಿ ‘ಮಿಸಸ್ ಕರ್ನಾಟಕ ಸ್ಟೈಲ್ ಐಕಾನ್’ ಹಾಗೂ ‘ಮಿಸಸ್ ಕರ್ನಾಟಕ ಸುಪ್ರೀಂ’ ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಕೌಟುಂಬಿಕ ಕಾರಣಗಳಿಂದ ಗ್ಲಾಮರ್ ಲೋಕದಿಂದ ಸ್ವಲ್ಪ ದೂರವಿದ್ದರೂ, ತಮ್ಮೊಳಗಿನ ಛಲವನ್ನು ಬಿಡಲಿಲ್ಲ. ತಮ್ಮ ಈ ಜಯವನ್ನು ಹೆತ್ತವರು, ಕುಟುಂಬ ವರ್ಗ ಹಾಗೂ ಮಸ್ಕತ್‌ನ ಸ್ನೇಹಿತರಿಗೆ ಸಮರ್ಪಿಸಿರುವ ಶ್ವೇತಾ, ಮಹಿಳೆಯರು ತಮ್ಮ ಕನಸುಗಳಿಗೆ ಎಂದಿಗೂ ವಿದಾಯ ಹೇಳಬಾರದು ಎಂದು ಸ್ಫೂರ್ತಿದಾಯಕ ಸಂದೇಶ ನೀಡಿದ್ದಾರೆ.

ಮುಂದಿನ ಜಾಗತಿಕ ಗ್ರ್ಯಾಂಡ್ ಫಿನಾಲೆಗೆ ಸಿದ್ಧತೆ

ಭಾರತ್ ಕುಮಾರ್ ಭ್ರಮರ್ ನೇತೃತ್ವದ ‘ಹೌಟ್ ಮಾಂಡ್’ ಸಂಸ್ಥೆ ಆಯೋಜಿಸಿದ ಈ ಝೋನ್-2 ಸ್ಪರ್ಧೆಯಲ್ಲಿ ವಿಜೇತರಾಗಿರುವ ಶ್ವೇತಾ ಕೋಟ್ಯಾನ್, ಈಗ ಮುಂದಿನ ಹಂತವಾಗಿ ಯುಎಸ್ (US) ಅಥವಾ ಯುಕೆ (UK) ನೆಲದಲ್ಲಿ ನಡೆಯಲಿರುವ ಅಂತಿಮ ಅಂತರರಾಷ್ಟ್ರೀಯ ಗ್ರ್ಯಾಂಡ್ ಫಿನಾಲೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಕರಾವಳಿಯ ಪ್ರತಿಭೆಯೊಂದು ಜಾಗತಿಕ ಮಟ್ಟದಲ್ಲಿ ಹೀಗೆ ಮಿನುಗುತ್ತಿರುವುದು ಇಡೀ ರಾಜ್ಯಕ್ಕೆ ಮತ್ತು ತುಳುನಾಡಿಗೆ ಅಪಾರ ಹೆಮ್ಮೆ ತಂದಿದೆ.

#SwethaKotian #Haut MondeMrsIndiaWorldwide #MangalorePride #TuluNaduCulture #GlobalAchiever #UdayakalaNews

Related Posts

Leave a Reply

Your email address will not be published. Required fields are marked *