Menu

ಅಪ್ರಾಪ್ತೆಯೊಂದಿಗೆ ಮದುವೆ, ನೆರವಾದ ಇಬ್ಬರಿಗೆ 20 ವರ್ಷ ಜೈಲು ಹಾಗೂ ದಂಡ!

ಉದಯಕಾಲ ನ್ಯೂಸ್, ಶಿವಮೊಗ್ಗ: 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಲೈಂಗಿಕ ದೌರ್ಜನ್ಯ ಎಸಗಿದ ಯುವಕ ಹಾಗೂ ಆ ಕೃತ್ಯಕ್ಕೆ ಪರೋಕ್ಷವಾಗಿ ನೆರವಾದ ಇಬ್ಬರಿಗೆ ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಭಾರಿ ಮೊತ್ತದ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಮಕ್ಕಳ ಮೇಲಿನ ಅಪರಾಧಗಳ ವಿಚಾರಣೆಯಲ್ಲಿ ಈ ತೀರ್ಪು ಅತ್ಯಂತ ಮಹತ್ವದ್ದೆನಿಸಿದೆ.

ಬಾಲಕಿ ಅಪಹರಣ, ಮದುವೆ ಹಾಗೂ ಪೋಕ್ಸೊ ಪ್ರಕರಣ ದಾಖಲು

ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಯುವಕನೊಬ್ಬ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದನು. ತದನಂತರ ಆಕೆಯೊಂದಿಗೆ ವಿವಾಹವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಕೃತ್ಯಕ್ಕೆ ಪ್ರಮುಖವಾಗಿ ಇಬ್ಬರು ಸಹಕರಿಸಿದ್ದು, 33 ವರ್ಷದ ಎರಡನೇ ಆರೋಪಿ ಅವರು ಪರಾರಿಯಾಗಲು ತನ್ನ ಸ್ವಂತ ಕಾರನ್ನು ಒದಗಿಸಿದ್ದನು. ಮೂರನೇ ಆರೋಪಿ 28 ವರ್ಷದ ಮತ್ತೊಬ್ಬ ಯುವಕ ಬಾಲಕಿ ಹಾಗೂ ಮುಖ್ಯ ಆರೋಪಿಗೆ ತಲೆಮರೆಸಿಕೊಳ್ಳಲು ಆಶ್ರಯ ಕಲ್ಪಿಸಿದ್ದನು.

ಈ ಕುರಿತು ಸಂತ್ರತ ಬಾಲಕಿ ಹಾಗೂ ಪೋಷಕರ ದೂರಿನ ಮೇರೆಗೆ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (POCSO) ಕಾಯ್ದೆ ಹಾಗೂ ಇತರೆ ಗಂಭೀರ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಕೆ.ಪಿ. ರುದ್ರೇಶ್ ಅವರು ಅತ್ಯಂತ ದಕ್ಷತೆಯಿಂದ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ದೋಷಿಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 3.60 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸಂತ್ರಸ್ತೆಗೆ ಪರಿಹಾರ ಧನ ಪಾವತಿಸಲು ನಿರ್ದೇಶನ

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಶಿಕ್ಷೆಯ ಜತೆಗೆ ಸಂತ್ರತ ಬಾಲಕಿಯ ಪುನರ್ವಸತಿಗೂ ಆದ್ಯತೆ ನೀಡಿದೆ. ದಂಡದ ಮೊತ್ತದಿಂದ ನೊಂದ ಬಾಲಕಿಗೆ 3 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸೂಚಿಸಿದೆ. ಇದರೊಂದಿಗೆ ಸರ್ಕಾರದಿಂದಲೂ ಹೆಚ್ಚುವರಿಯಾಗಿ 4 ಲಕ್ಷ ರೂ.ಗಳ ಪರಿಹಾರ ಧನವನ್ನು ಸಂತ್ರಸ್ತೆಗೆ ಬಿಡುಗಡೆ ಮಾಡಬೇಕು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಹಾಗೂ ಬಾಲ್ಯ ವಿವಾಹಗಳಿಗೆ ನೆರವಾಗುವವರಿಗೆ ಈ ತೀರ್ಪು ಸ್ಪಷ್ಟ ಎಚ್ಚರಿಕೆಯ ಸಂದೇಶವಾಗಿದೆ.

#ShivamoggaNews #POCSOAct #ChildMarriage #CourtVerdict #ShikaripuraPolice #UdayakalaNews

Related Posts

Leave a Reply

Your email address will not be published. Required fields are marked *