Thursday, November 05, 2026
Menu

ದೀಪಾವಳಿಗಾಗಿ 18 ಸಾವಿರ ವಿಶೇಷ ರೈಲುಗಳ ಸಂಚಾರ- ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ಉದಯಕಾಲ ನ್ಯೂಸ್, ಜೈಪುರ (ರಾಜಸ್ಥಾನ): ದೇಶಾದ್ಯಂತ ದೀಪಾವಳಿ, ದುರ್ಗಾ ಪೂಜೆ ಹಾಗೂ ಛತ್ ಹಬ್ಬಗಳ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಭಾರತೀಯ ರೈಲ್ವೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಈ ಬಾರಿ ದೇಶಾದ್ಯಂತ ಬರೋಬ್ಬರಿ 18,000 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಬ್ಬದ ಅವಧಿಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ರೈಲ್ವೆ ಆಡಳಿತ ವ್ಯವಸ್ಥೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಕಳೆದ ವರ್ಷದ ಹಬ್ಬದ ಋತುವಿನಲ್ಲಿ ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಮುಂತಾದ ಪ್ರಮುಖ ಹಬ್ಬಗಳ ಆಚರಣೆಗಾಗಿ ಸುಮಾರು 12,000 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಆದರೆ, ಈ ವರ್ಷ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ರೈಲುಗಳನ್ನು ಸೇರಿಸಲಾಗಿದ್ದು, ಒಟ್ಟು 18,000 ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚಾರ ನಡೆಸಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಯಾಣಿಕರ ಸೌಲಭ್ಯ ವಿಸ್ತರಣೆ ಮತ್ತು ನೂಕುನುಗ್ಗಲು ನಿಯಂತ್ರಣ

ಹಬ್ಬದ ಸಂದರ್ಭದಲ್ಲಿ ಪ್ರಮುಖ ರೈಲು ನಿಲ್ದಾಣಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು. ನಿಲ್ದಾಣಗಳಲ್ಲಿ ಉತ್ತಮ ಗುಣಮಟ್ಟದ ಶೌಚಾಲಯಗಳ ನಿರ್ಮಾಣ, ಉತ್ತಮ ಗಾಳಿಯಾಡುವಿಕೆಗಾಗಿ ಸುಧಾರಿತ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ, ಪ್ರಯಾಣಿಕರ ನೂಕುನುಗ್ಗಲನ್ನು ತಪ್ಪಿಸಲು ಟಿಕೆಟ್ ಕೌಂಟರ್‌ಗಳನ್ನು ನಿಗದಿತ ಸ್ಥಳಗಳ ಒಳಗೇ ಸೂಕ್ತವಾಗಿ ಸ್ಥಳಾಂತರಿಸಲಾಗಿದ್ದು, ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಟಿಕೆಟ್ ಸೇವೆಗಳನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ವರ್ಷವೂ ಪ್ರಯಾಣಿಕರಿಗೆ ಹಿಂದಿನ ವರ್ಷಕ್ಕಿಂತ ಉತ್ತಮ ಹಾಗೂ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.

1,300 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆ ಪ್ರಗತಿ

ದೇಶದ ರೈಲು ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾತನಾಡಿದ ಸಚಿವರು, ಮುಂದಿನ ಐದು ದಶಕಗಳಲ್ಲಿ ಪ್ರಯಾಣಿಕರ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬೃಹತ್ ಯೋಜನೆಗಳನ್ನು ರೂಪಿಸಲಾಗುತ್ತಿದೆ. ನಿಲ್ದಾಣಗಳ ಪ್ರಯಾಣಿಕರ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವತ್ತ ವಿಶೇಷ ಗಮನಹರಿಸಲಾಗಿದೆ ಎಂದರು. ದೇಶಾದ್ಯಂತ ಒಟ್ಟು 1,300 ಪ್ರಮುಖ ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಅದರಲ್ಲಿ ಸುಮಾರು 400 ನಿಲ್ದಾಣಗಳ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಹಬ್ಬದ ದಿನಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಅಡಚಣೆಯಾಗದಂತೆ ರೈಲ್ವೆ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಸ್ಪಪಡಿಸಿದರು.
#AshwiniVaishnaw #IndianRailways #FestiveSpecialTrains #DiwaliTravel #RailwayDevelopment #UdayakalaNews

Related Posts

Leave a Reply

Your email address will not be published. Required fields are marked *