ಉದಯಕಾಲ ನ್ಯೂಸ್, ಜೈಪುರ: ರಾಜಸ್ಥಾನದ ನಗೌರ್ ನಗರದಲ್ಲಿ ಗನ್ಪೌಡರ್ (ಬೆರುಮದ್ದು) ತಯಾರಿಸಲು ಬಳಸುವ ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಸಂಗ್ರಹಿಸಿಡಲಾಗಿದ್ದ ಖಾಸಗಿ ಗೋಡೋನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಭಾರಿ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೋಡೋನ್ನೊಳಗೆ ಇನ್ನುಳಿದ ಹಲವು ಕಾರ್ಮಿಕರು ಸಿಲುಕಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ಸ್ಫೋಟದ ತೀವ್ರತೆಗೆ ದಟ್ಟವಾದ ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿದ್ದು, ಸುತ್ತಮುತ್ತಲಿನ ಹಲವು ಕಿಲೋಮೀಟರ್ ಪ್ರದೇಶದ ಜನರಲ್ಲಿ ತೀವ್ರ ಆತಂಕ ಹಾಗೂ ಭೀತಿಯನ್ನುಂಟುಮಾಡಿದೆ. ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದ್ದರಿಂದ ಬೆಚ್ಚಿಬಿದ್ದ ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಿಂದ ಆಚೆಗೋಡಿ ಬಂದಿದ್ದಾರೆ.
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ; ಗೋಡೋನ್ನಲ್ಲಿ ಸಿಲುಕಿರುವ ಕಾರ್ಮಿಕರು
ಘಟನೆಯ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ನಾಗೌರ್ ಕೊತ್ವಾಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಪೊಲೀಸರು ಮತ್ತು ರಕ್ಷಣಾ ಪಡೆ ಗೋಡೋನ್ನ ಅವಶೇಷಗಳಡಿ ಸಿಲುಕಿರುವ ಕಾರ್ಮಿಕರಿಗಾಗಿ ಶೋಧಿಸುತ್ತಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಅನಾಹುತ ಸಂಭವಿಸಿದ ಸಮಯದಲ್ಲಿ ಗೋಡೋನ್ ಒಳಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಒಟ್ಟಾರೆ ಎಷ್ಟು ಮಂದಿ ಕಾರ್ಮಿಕರು ಒಳಗಿದ್ದರು ಮತ್ತು ಎಷ್ಟು ಜನರು ಸುರಕ್ಷಿತವಾಗಿ ಹೊರಬರಲು ಶಕ್ತರಾಗಿದ್ದಾರೆ ಎಂಬ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ಅಧಿಕೃತಗೊಂಡಿದ್ದು, ಮೃತರ ವಿವರ ಕಲೆಹಾಕಲಾಗುತ್ತಿದೆ.
ಪಟಾಕಿ ತಯಾರಿಕಾ ಪರವಾನಗಿ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಫೋಟ ಸಂಭವಿಸಿದ ಈ ಗೋಡೋನ್ನಲ್ಲಿ ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಅಕ್ರಮ ಅಥವಾ ಸಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಈ ಸ್ಥಳದಲ್ಲಿ ಪಟಾಕಿ ತಯಾರಿಸಲು ಪರವಾನಗಿ ಇತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಪ್ರಮುಖವಾಗಿ ಗನ್ಪೌಡರ್ ತಯಾರಿಸಲು ಬಳಸಲಾಗುತ್ತಿದ್ದು, ಇಲ್ಲಿಯೂ ಅದೇ ಚಟುವಟಿಕೆ ನಡೆಯುತ್ತಿತ್ತೆ ಎಂಬುದು ಪೂರ್ಣ ಪ್ರಮಾಣದ ತನಿಖೆಯ ಬಳಿಕವಷ್ಟೇ ಅಧಿಕೃತವಾಗಿ ತಿಳಿದುಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.
#NagaurExplosion #RajasthanNews #GunpowderBlast #PotassiumNitrate #UdayakalaNews


