Thursday, November 05, 2026
Menu

ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಆರೋಗ್ಯ ಸ್ಥಿರ: ಚಿಕಿತ್ಸೆ ಮುಂದುವರಿಕೆ

ಉದಯಕಾಲ ನ್ಯೂಸ್ ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಸಂಸ್ಥಾಪಕ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟ ಹಾಗೂ ಎದೆಗೆ ಸಂಬಂಧಿಸಿದ ಸೋಂಕಿನ ಸಮಸ್ಯೆಯಿಂದ ಬಳಲುತ್ತಿರುವ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ (ನವೆಂಬರ್ 4) ಪುಣೆಯ ಮಲ್ಟಿ-ಸ್ಪೆಷಾಲಿಟಿ ಹೆಲ್ತ್‌ಕೇರ್ ಸೆಂಟರ್‌ನಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಶರದ್ ಪವಾರ್ ಅವರಿಗೆ, ಕೆಲವೇ ಗಂಟೆಗಳ ಅಂತರದಲ್ಲಿ ಆರೋಗ್ಯದಲ್ಲಿ ಮತ್ತೆ ಅಸ್ವಸ್ಥತೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆತರಲಾಗಿದ್ದು, ಅಲ್ಲಿನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಸಿರಾಟ ಹಾಗೂ ಎದೆ ಸೋಂಕು

ಈ ಕುರಿತು ಮಾಹಿತಿ ನೀಡಿರುವ ವೈದ್ಯ ಡಾ. ಸಮ್ದಾನಿ ಅವರು, ಶರದ್ ಪವಾರ್ ಅವರಿಗೆ ಉಸಿರಾಟದ ತೊಂದರೆ ಹಾಗೂ ಎದೆಗೆ ಸಂಬಂಧಿಸಿದ ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ನಿರಂತರವಾಗಿ ನೋಡುತ್ತಿದ್ದು, ಹಿರಿಯ ನಾಯಕರ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆತಂಕಪಡುವ ಯಾವುದೇ ಅಗತ್ಯವಿಲ್ಲ ಎಂದು ಕುಟುಂಬದ ಮೂಲಗಳು ಮತ್ತು ವೈದ್ಯಕೀಯ ತಂಡ ಭರವಸೆ ನೀಡಿದೆ.

ಪ್ರಧಾನಿ ಮೋದಿ ದೂರವಾಣಿ ಕರೆ; ಶೀಘ್ರ ಗುಣಮುಖರಾಗಲು ಹಾರೈಕೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ರಾಜನಾಯಕ ಶರದ್ ಪವಾರ್ ಅವರ ಆರೋಗ್ಯ ವಿಚಾರಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಪವಾರ್ ಅವರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ಅವರ ಆರೋಗ್ಯದ ಬಗ್ಗೆ ವಿಚಾರಿಸುವುದರ ಜೊತೆಗೆ, ಸಂಪೂರ್ಣ ವಿಶ್ರಾಂತಿ ಪಡೆದು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ ಎಂದು ಪವಾರ್ ಅವರ ಆಪ್ತ ಸಹಾಯಕ ವಿಠ್ಠಲ್ ಮಣಿಯಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ದೇಶದ ವಿವಿಧ ರಾಜಕೀಯ ಗಣ್ಯರು ಹಾಗೂ ಮುಖಂಡರು ಶರದ್ ಪವಾರ್ ಅವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ಹಾರೈಸಿದ್ದಾರೆ.
#SharadPawar #NCP #BreachCandyHospital #MumbaiNews #PMModi #UdayakalaNews

Related Posts

Leave a Reply

Your email address will not be published. Required fields are marked *