ಉದಯಕಾಲ ನ್ಯೂಸ್, ಮೈಸೂರು: ನಂಜನಗೂಡು ತಾಲೂಕಿನ ಆಕಳ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಗಳ ಹಾವಳಿ ತೀವ್ರಗೊಂಡಿದ್ದು, ಡ್ರೋನ್ ಕ್ಯಾಮರಾದಲ್ಲಿ ಒಂದೇ ಬಾರಿಗೆ ನಾಲ್ಕು ಹುಲಿಗಳು ಸೆರೆಯಾಗಿವೆ. ಇದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆದಿವಾಸಿ ಮಹಿಳೆಯೊಬ್ಬರನ್ನು ಹುಲಿ ಬಲಿ ಪಡೆದ ಬೆನ್ನಲ್ಲೇ ಈ ಆಘಾತಕಾರಿ ಬೆಳವಣಿಗೆಯಾಗಿದ್ದು, ಅರಣ್ಯ ಇಲಾಖೆ ಹುಲಿಗಳ ಸೆರೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಎರಡು ದಿನಗಳ ಹಿಂದಷ್ಟೇ ಆಕಳ ಗ್ರಾಮದ ರೈತ ಪರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ರೈತ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಬುಧವಾರ ಡೋರನಕಟ್ಟೆ ಕಾಲೋನಿಯಲ್ಲಿ ಕಾಡಾನೆ ಅಥವಾ ಹುಲಿ ದಾಳಿಯಿಂದ ಆದಿವಾಸಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಸರಣಿ ಹುಲಿ ದಾಳಿಗಳಿಂದ ಬೆಚ್ಚಿಬಿದ್ದ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿ, ನರಭಕ್ಷಕ ಹುಲಿಗಳನ್ನು ಸೆರೆಹಿಡಿಯುವಂತೆ ತೀವ್ರ ಒತ್ತಾಯಿಸಿದ್ದರು.
ಡ್ರೋನ್ ಕ್ಯಾಮರಾದಲ್ಲಿ ನಾಲ್ಕು ಹುಲಿಗಳು ಪತ್ತೆ
ಗ್ರಾಮಸ್ಥರ ಆಕ್ರೋಶ ಹಾಗೂ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿಗಳನ್ನು ಸೆರೆಹಿಡಿಯಲು ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕಾರ್ಯಾಚರಣೆಯ ಭಾಗವಾಗಿ ಅರಣ್ಯ ಪ್ರದೇಶ ಹಾಗೂ ಕೃಷಿ ಜಮೀನಿನ ಸುತ್ತಲೂ ಡ್ರೋನ್ ಕ್ಯಾಮರಾ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಈ ವೇಳೆ ಬುಧವಾರ ರಾತ್ರಿ ನಡೆಸಿದ ಡ್ರೋನ್ ಸರ್ವೇಯಲ್ಲಿ ಒಂದೇ ಕಡೆ ಬರೋಬ್ಬರಿ ನಾಲ್ಕು ಹುಲಿಗಳು ಸಂಚರಿಸುತ್ತಿರುವುದು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಒಂದೇ ಪ್ರದೇಶದಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಅರಣ್ಯ ಇಲಾಖೆಯ ನಿದ್ರೆಗೆಡಿಸಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ರಾತ್ರಿ ವೇಳೆ ಜಮೀನುಗಳ ಕಡೆಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ಕಾರ್ಯಾಚರಣೆ ಚುರುಕು; ಗ್ರಾಮಸ್ಥರಿಗೆ ಎಚ್ಚರಿಕೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನಂಜನಗೂಡು ವಲಯ ಅರಣ್ಯಾಧಿಕಾರಿ (RFO) ನಿತಿನ್ ಕುಮಾರ್, ಡ್ರೋನ್ ಕ್ಯಾಮರಾದಲ್ಲಿ ನಾಲ್ಕು ಹುಲಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲಾಖೆಯು ಬುಧವಾರ ರಾತ್ರಿಯಿಂದಲೇ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದೆ ಎಂದರು. ಹುಲಿಗಳ ಸೆರೆ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿಯುವವರೆಗೂ ರೈತರು ಯಾರೂ ಕೂಡ ತಮ್ಮ ಜಮೀನುಗಳತ್ತ ಸುಳಿಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗ್ರಾಮಸ್ಥರ ಸುರಕ್ಷತೆಗಾಗಿ ಅರಣ್ಯ ಸಿಬ್ಬಂದಿ ಹಾಗೂ ತಜ್ಞರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಹುಲಿಗಳನ್ನು ಆದಷ್ಟು ಬೇಗ ಸೆರೆಹಿಡಿಯಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
#MysuruNews #TigerAttract #Nanjangud #AkalaVillage #ForestDepartment #UdayakalaNews

