Wednesday, November 04, 2026
Menu

ಮಾಜಿ ನಕ್ಸಲ್ ಮುಂಡಗಾರು ಲತಾ ಕಡಬ ನ್ಯಾಯಾಲಯಕ್ಕೆ: ವಿಚಾರಣೆ ಬಳಿಕ ಪೊಲೀಸರ ವಶಕ್ಕೆ

ಉದಯಕಾಲ ನ್ಯೂಸ್, ದಕ್ಷಿಣ ಕನ್ನಡ: ಪಶ್ಚಿಮ ಘಟ್ಟದ ಕಾಡುಗಳಲ್ಲಿ ದೀರ್ಘಕಾಲ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಇತ್ತೀಚೆಗೆ ಸರ್ಕಾರದ ಮುಂದೆ ಶರಣಾಗಿರುವ ಪ್ರಮುಖ ಮಾಜಿ ನಕ್ಸಲ್ ನಾಯಕಿ ಮುಂಡಗಾರು ಲತಾ ಅಲಿಯಾಸ್ ಶ್ರೀಲತಾ ಅವರನ್ನು 2018ರ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಸಂಚಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆಯ ಬಳಿಕ ಉಪ್ಪಿನಂಗಡಿ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮಹಜರು ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ.

2018ರ ಪ್ರಕರಣ? ಸ್ಥಳ ಮಹಜರಿಗೆ ಸಿದ್ಧತೆ

2018ರಲ್ಲಿ ಕಡಬ ತಾಲೂಕಿನ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿಗಳಾದ ಸುರೇಶ್ ಮತ್ತು ಲೀಲಾ ಅವರ ಮನೆಗೆ ರಾತ್ರಿ ವೇಳೆ ಮುಂಡಗಾರು ಲತಾ ನೇತೃತ್ವದ ನಕ್ಸಲರ ತಂಡ ಅನಿರೀಕ್ಷಿತವಾಗಿ ಆಗಮಿಸಿತ್ತು. ಮನೆಯವರನ್ನು ಬೆದರಿಸಿ ಊಟ ಮಾಡಿದ್ದಲ್ಲದೆ, ಅಕ್ಕಿ ಸೇರಿದಂತೆ ಕೆಲವು ಆಹಾರ ಸಾಮಗ್ರಿಗಳನ್ನು ಪಡೆದುಕೊಂಡು ತೆರಳಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಘಟನಾ ಸ್ಥಳದ ಮಹಜರು ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಲತಾ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿದ್ದು, ಕಡಬ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸಂಜೆ ವೇಳೆಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಉಪ್ಪಿನಂಗಡಿ ಠಾಣೆಗೆ ಕರೆದೊಯ್ಯಲಾಗಿದ್ದು, ಶಿರಾಡಿ ಗ್ರಾಮದ ಮಿತ್ತಮಜಲು ಪ್ರದೇಶದಲ್ಲಿ ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಬೆಂಗಳೂರು ಕಾರಾಗೃಹಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನ್ಯಾಯಾಲಯದ ಆವರಣದಲ್ಲಿ ಎರಡು ವ್ಯಾನ್‌ಗಳು ಸೇರಿದಂತೆ ಆರು ಪೊಲೀಸ್ ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

24 ವರ್ಷ ನಕ್ಸಲ್ ಜೀವನ, 2025ರಲ್ಲಿ ಶರಣಾಗತಿ

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಆದಿವಾಸಿ ಕುಟುಂಬದವರಾದ ಮುಂಡಗಾರು ಲತಾ, ಆರಂಭದಲ್ಲಿ ಸ್ಥಳಾಂತರ ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಂಡು, 2000ನೇ ಇಸವಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಸಶಸ್ತ್ರ ಮಾವೋವಾದಿ ಚಳವಳಿಗೆ ಸೇರಿದ್ದರು. ಪಶ್ಚಿಮ ಘಟ್ಟಗಳು ಹಾಗೂ ಕೇರಳ, ತಮಿಳುನಾಡು ಗಡಿ ಭಾಗದ ಅರಣ್ಯಗಳಲ್ಲಿ ಸುಮಾರು 24 ವರ್ಷಗಳ ಕಾಲ ನಕ್ಸಲ್ ತಂಡದ ಪ್ರಮುಖ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಇವರ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಿದ್ದವು.

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರು 2025ರ ಜನವರಿ 8ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಶರಣಾಗಿದ್ದರು. ಶರಣಾಗತಿಯ ನಂತರವೂ ಹಳೆಯ ಪ್ರಕರಣಗಳ ತನಿಖೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯ ಮತ್ತು ಶಿರಾಡಿ ಘಾಟ್ ಅರಣ್ಯ ಪ್ರದೇಶಗಳ ಹಿಂದಿನ ನಕ್ಸಲ್ ಚಟುವಟಿಕೆಗಳು ಮತ್ತೆ ಸ್ಥಳೀಯವಾಗಿ ಗಮನ ಸೆಳೆದಿವೆ.

#MundagaruLatha #FormerNaxal #KadabaCourt #UppinangadiPolice #WesternGhats #UdayakalaNews #KarnatakaNews

Related Posts

Leave a Reply

Your email address will not be published. Required fields are marked *