Wednesday, November 04, 2026
Menu

ಸೋನಮ್ ವಾಂಗ್‌ಚುಕ್ ಶಾಲೆ ಮುಚ್ಚಲು ನೋಟಿಸು ಕೊಟ್ಟ ಲಡಾಖ್ ಆಡಳಿತ!

ಉದಯಕಾಲ ನ್ಯೂಸ್, ಶ್ರೀನಗರ: ಖ್ಯಾತ ಪರಿಸರ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ (Sonam Wangchuk) ಸ್ಥಾಪಿಸಿರುವ ಲಡಾಖ್‌ನ ಡೆಸರ್ಟ್ ಫ್ಲವರ್ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಲಡಾಖ್ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೋನಮ್ ವಾಂಗ್‌ಚುಕ್ ಅವರ ‘ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್’ (HIAL) ಸಂಸ್ಥೆಯ ಅಡಿಯಲ್ಲಿ ಲೇಹ್‌ನ ಫಿಯಾಂಗ್‌ನಲ್ಲಿ ಈ ಡೆಸರ್ಟ್ ಫ್ಲವರ್ ಶಾಲೆ ಕಾರ್ಯಾಚರಿಸುತ್ತಿದೆ. ಅಗತ್ಯ ಕಾನೂನುಬದ್ಧ ಅನುಮತಿಗಳು ಅಥವಾ ಒಪ್ಪಿಗೆಯನ್ನು ಪಡೆಯದೆ ಶಾಲೆಯಲ್ಲಿ ತರಗತಿಗಳು ಹಾಗೂ ಇತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂಬ ಕಾರಣ ನೀಡಿ, ಲೇಹ್ ತಹಶೀಲ್ದಾರ್ ಕಚೇರಿಯು ನವೆಂಬರ್ 1 ರಂದು HIAL ನ ಸಹ-ಸಂಸ್ಥಾಪಕಿ ಹಾಗೂ ಸಿಇಒ (ಸೋನಮ್ ವಾಂಗ್‌ಚುಕ್ ಅವರ ಪತ್ನಿ) ಗೀತಾಂಜಲಿ ಜೆ. ಅಂಗ್ಮೋ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

1,076 ಕನಾಲ್ ಭೂಮಿ ಹಂಚಿಕೆ ವಿವಾದ

HIAL ಸಂಸ್ಥೆಗೆ ಈ ಹಿಂದೆ ನೀಡಲಾಗಿದ್ದ 1,076 ಕನಾಲ್ ಹಾಗೂ ಒಂದು ಮಾರ್ಲಾ ಭೂಮಿಯ ಹಂಚಿಕೆಯನ್ನು ಆಡಳಿತ ಮಂಡಳಿ ರದ್ದುಗೊಳಿಸಿತ್ತು. ಈ ಭೂಮಿ ಹಂಚಿಕೆ ರದ್ದತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಹಾಗೂ ವಿಚಾರಣೆ ಮುಂದುವರಿದಿದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಶಾಲೆಯ ಕಾರ್ಯನಿರ್ವಹಣೆ ಕುರಿತು ಯಾವುದೇ ಮುಂದಿನ ಹೆಜ್ಜೆ ಇಡಬಾರದು ಮತ್ತು ನ್ಯಾಯಾಲಯದ ಪ್ರಕ್ರಿಯೆಗೆ ಧಕ್ಕೆ ತರುವಂತಹ ಯಾವುದೇ ಕ್ರಮ ಕೈಗೊಳ್ಳದೆ ಕಟ್ಟುನಿಟ್ಟಾಗಿ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
#SonamWangchuk #LadakhNews #DesertFlowerSchool #HIAL #Leh #JammuAndKashmirHighCourt #EducationNews

Related Posts

Leave a Reply

Your email address will not be published. Required fields are marked *