ಫ್ಲೋರಿಡಾ(ಅಮೆರಿಕ): ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಒಂಬತ್ತು ಜನರೊಂದಿಗೆ ತೆರಳುತ್ತಿದ್ದ ಖಾಸಗಿ ಬಿಸಿನೆಸ್ ಜೆಟ್ ವಿಮಾನವೊಂದು ಭಾನುವಾರ ಮಧ್ಯಾಹ್ನ ರಸ್ತೆಯ ಬಳಿ ಅಪ್ಪಳಿಸಿ ಭೀಕರವಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನಿಂದ ಬಹಾಮಾಸ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನವು ಆಕಾಶದಿಂದ ಕ್ಷಿಪಣಿಯಂತೆ ಧುಮುಕಿ ಸ್ಫೋಟಗೊಂಡ ದೃಶ್ಯವು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅಪಘಾತದ ತೀವ್ರತೆಗೆ ರಸ್ತೆಯ ಪಕ್ಕದಲ್ಲಿ ದೊಡ್ಡ ಗುಳಿಯೇ ನಿರ್ಮಾಣವಾಗಿದ್ದು, ಅಮೆರಿಕದ ವಾಯುಯಾನ ಇಲಾಖೆ ಹಾಗೂ ಸಾರಿಗೆ ಕಾರ್ಯದರ್ಶಿಗಳು ಘಟನೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೀಡಿರುವ ಮಾಹಿತಿಯ ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್ – ಬರ್ಗ್‌ಸ್ಟ್ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಬಿಸಿನೆಸ್ ಜೆಟ್, ಬಹಾಮಾಸ್‌ನ ನಾರ್ತ್ ಎಲ್ಯೂಥೆರಾ ವಿಮಾನ ನಿಲ್ದಾಣದತ್ತ ಸಾಗುತ್ತಿತ್ತು. ಮಧ್ಯಾಹ್ನ 12:50ರ ಸುಮಾರಿಗೆ ವೆಸ್ಟ್ ಪಾಮ್ ಬೀಚ್‌ನಿಂದ ನೈಋತ್ಯಕ್ಕೆ ಸುಮಾರು 7 ಮೈಲಿ ದೂರವಿರುವ ಗ್ರೀನ್‌ಏಕರ್ಸ್ ಪ್ರದೇಶದ ಕ್ರೆಸ್ಟ್‌ಹೇವನ್ ಬಳಿ ಈ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಒಂಬತ್ತು ಮಂದಿಯೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಸ್ಪಷ್ಟಪಡಿಸಿದ್ದಾರೆ.
ಪೈಲಟ್ ಕೊನೆಯ ಕ್ಷಣದ ಪರದಾಟ
ವಿಮಾನವು ಸುಮಾರು 35,000 ಅಡಿ ಎತ್ತರದಲ್ಲಿ ಪೂರ್ವಕ್ಕೆ ಸಾಗುತ್ತಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಮಳೆ-ಹಿಮಪಾತದ ತೊಂದರೆಯನ್ನು ಪೈಲಟ್‌ಗಳು ಎದುರಿಸಿದ್ದರು. ಇನ್ನೂ 2,000 ಅಡಿ ಎತ್ತರಕ್ಕೆ ಏರಿಸಲು ಅನುಮತಿ ಕೋರಿದ್ದ ಪೈಲಟ್, ಅಂತಿಮವಾಗಿ ತುರ್ತು ಪರಿಸ್ಥಿತಿ ಎದುರಾಗಿರುವುದನ್ನು ಮನಗಂಡು ರೇಡಿಯೋ ಮೂಲಕ ಮೇ-ಡೇ, ಮೇ-ಡೇ, ನಾವು 8,000 ಅಡಿಗಳಷ್ಟು ಕೆಳಗೆ ಇಳಿಯುತ್ತಿದ್ದೇವೆ ಎಂದು ಸಹಾಯಕ್ಕಾಗಿ ನರಳಾಡುತ್ತಾ ತುರ್ತು ಕರೆ ಮಾಡಿದ್ದರು. ನೆಲಕ್ಕೆ ಅಪ್ಪಳಿಸುವ ಮುನ್ನ ವಿಮಾನವು ತೀವ್ರವಾಗಿ ಬಲಕ್ಕೆ ಒರೆಯಾಗಿತ್ತು ಎಂದು ವಾಯು ಸಂಚಾರ ನಿಯಂತ್ರಣ ರೆಕಾರ್ಡಿಂಗ್‌ಗಳು ಹಾಗೂ ಫ್ಲೈಟ್ ಟ್ರ್ಯಾಕಿಂಗ್ ಡೇಟಾ ದೃಢಪಡಿಸಿವೆ.
ಫ್ಲೋರಿಡಾ ಗವರ್ನರ್ ಸ್ಪಷ್ಟನೆ
ಘಟನಾ ಸ್ಥಳಕ್ಕೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹಾಗೂ NTSB ತನಿಖಾ ತಂಡಗಳನ್ನು ರವಾನಿಸಲಾಗಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಾತನಾಡಿ, ಅಪಘಾತದ ಭೀಕರತೆ ಹೇಗಿತ್ತೆಂದರೆ, ವಿಮಾನವು ಆಕಾಶದಿಂದ ಕ್ಷಿಪಣಿಯಂತೆ ಕೆಳಗೆ ಬಿತ್ತು. ಆದರೆ ಸಮಾಧಾನಕರ ಸಂಗತಿಯೆಂದರೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಯಾವುದೇ ಅಪಾಯವಾಗಿಲ್ಲ ಮತ್ತು ರಸ್ತೆಯಲ್ಲಿದ್ದವರು ಸಾವನ್ನಪ್ಪಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ವಿವರಗಳು ಹಾಗೂ ದುರಂತಕ್ಕೆ ನಿಖರವಾದ ಕಾರಣ ತನಿಖೆಯ ಬಳಿಕ ಲಭ್ಯವಾಗಲಿದೆ.
#FloridaJetCrash #BusinessJetAccident #USNews #UdayakalaNews #PlaneCrash #BahamasFlight #BreakingNews #AviationAccident

