ಉದಯಕಾಲ ನ್ಯೂಸ್, ಬೆಂಗಳೂರು: ಭಾರತದಲ್ಲಿ ಕ್ರಿಮಿನಲ್ ಪ್ರಕರಣಗಳಿಂದ ಸಂಪೂರ್ಣವಾಗಿ ಖುಲಾಸೆಗೊಂಡಿದ್ದರೂ ಸಹ, ಕಾನೂನುಬದ್ಧ ವೀಸಾ ಇಲ್ಲದ ವಿದೇಶಿ ಪ್ರಜೆಗಳನ್ನು ದೇಶದಲ್ಲಿ ಮುಕ್ತವಾಗಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನನ್ನು ತಕ್ಷಣವೇ ಬಿಡುಗಡೆಗೊಳಿಸಿ ಮಾತೃದೇಶ ಪಾಕಿಸ್ತಾನಕ್ಕೆ ಮರಳಲು ‘ಎಕ್ಸಿಟ್ ಪಾಸ್’ ನೀಡುವಂತೆ ಕೋರಿ ಪಾಕ್ ಪ್ರಜೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಕಟ್ಟುನಿಟ್ಟಾಗಿ ವಜಾಗೊಳಿಸಿದೆ. ಈ ತೀರ್ಪು ದೇಶದ ಆಂತರಿಕ ಭದ್ರತೆ ಮತ್ತು ವಲಸಿಗರ ಕಾನೂನು ನಿಯಮಗಳ ಜಾರಿಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದೆನಿಸಿದೆ.
ಪಾಕಿಸ್ತಾನದ ಕರಾಚಿ ಮೂಲದ ನಿವಾಸಿ ಮೊಹಮ್ಮದ್ ಫಹಾದ್ ಹೈ ಅಲಿಯಾಸ್ ಮೊಹಮ್ಮದ್ ಕೋಯಾ ಎಂಬಾತ ಭಾರತಕ್ಕೆ ಆಗಮಿಸಿದ್ದ ವೇಳೆ ದಾಖಲಾಗಿದ್ದ ವಿವಿಧ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ, ನೆಲಮಂಗಲ ತಾಲೂಕಿನ ಸೋಂಡೇಕೊಪ್ಪದಲ್ಲಿರುವ ವಿದೇಶಿಯರ ಪುನರ್ವಸತಿ ಕೇಂದ್ರದಲ್ಲಿ ಬಂಧನದಲ್ಲಿರಿಸಲಾಗಿತ್ತು. ತನ್ನ ಬಂಧನವನ್ನು ಪ್ರಶ್ನಿಸಿ ಆತ ಹೈಕೋರ್ಟ್ನಲ್ಲಿ ‘ಹೆಬಿಯಾಸ್ ಕಾರ್ಪಸ್’ ಅರ್ಜಿ ದಾಖಲಿಸಿದ್ದನು.
ವಿಭಾಗೀಯ ಪೀಠದ ಆದೇಶ
ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ಅರ್ಜಿದಾರನ ಪರ ವಕೀಲರು ವಾದ ಮಂಡಿಸುತ್ತಾ, ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದ ಶಿಕ್ಷೆ ವಿರುದ್ಧ ಹೈಕೋರ್ಟ್ 2024ರಲ್ಲಿಯೇ ಅರ್ಜಿದಾರನನ್ನು ಖುಲಾಸೆಗೊಳಿಸಿದೆ. ಅಲ್ಲದೆ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮತ್ತೊಂದು ಮೇಲ್ಮನವಿಯನ್ನೂ 2026ರ ಏಪ್ರಿಲ್ನಲ್ಲಿ ಹೈಕೋರ್ಟ್ ವಜಾಗೊಳಿಸಿದೆ. ಪ್ರಸ್ತುತ ಆತನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಇಲ್ಲದಿರುವುದರಿಂದ ಆತನನ್ನು ಕೇಂದ್ರದಲ್ಲಿ ಇಟ್ಟುಕೊಳ್ಳುವುದು ಅಕ್ರಮ ಎಂದು ವಾದಿಸಿದ್ದರು.
ಆದರೆ, ಈ ವಾದವನ್ನು ತಳ್ಳಿಹಾಕಿದ ಕೇಂದ್ರ ಸರ್ಕಾರಿ ವಕೀಲರು, ಅರ್ಜಿದಾರ ಪಾಕಿಸ್ತಾನಿ ಪ್ರಜೆಯಾಗಿದ್ದು, ಭಾರತದಲ್ಲಿ ತಂಗಲು ಆತನ ಬಳಿ ಯಾವುದೇ ವೀಸಾ ಇಲ್ಲ. ವಿದೇಶಿಯರ ಕಾಯ್ದೆಯಡಿ ಆತನ ಚಲನವಲನದ ಮೇಲೆ ನಿರ್ಬಂಧ ವಿಧಿಸಿ ನಿಯಮಾನುಸಾರ ಆದೇಶ ಹೊರಡಿಸಲಾಗಿದೆ ಎಂದು ಕೋರ್ಟ್ಗೆ ವಿವರಿಸಿದರು.
ಕಾನೂನು ಪ್ರಕ್ರಿಯೆಗೆ ಅವಕಾಶ
ಉಭಯ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರಕರಣಗಳಿಂದ ಬಿಡುಗಡೆಯಾಗಿದ್ದರೂ, ಭಾರತದಲ್ಲಿ ಕಾನೂನುಬದ್ಧವಾಗಿ ಉಳಿದುಕೊಳ್ಳಲು ಅಗತ್ಯವಿರುವ ವೀಸಾ ಇಲ್ಲದ ಕಾರಣ ಅರ್ಜಿದಾರನು ಮುಕ್ತವಾಗಿ ಬಿಡುಗಡೆ ಕೋರಲು ಅವಕಾಶವಿಲ್ಲ. ವಿದೇಶಿಯರ ಕಾಯ್ದೆ, 1946ರ ಸೆಕ್ಷನ್ 3(2)(ಇ) ಅಡಿಯಲ್ಲಿ ಚಲನವಲನ ನಿರ್ಬಂಧಿಸಿರುವ ಆದೇಶವನ್ನು ಪ್ರಶ್ನಿಸದೆ ಬಿಡುಗಡೆ ಕೋರುವುದು ಸರಿಯಲ್ಲ ಎಂದು ತಿಳಿಸಿದೆ.
ಅದೇ ವೇಳೆ, ವಿದೇಶಿಯರ ಕಾಯ್ದೆಯಡಿ ವಿಧಿಸಲಾಗಿರುವ ನಿರ್ಬಂಧಿತ ಆದೇಶವನ್ನು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕ ಪ್ರಶ್ನಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
#KarnatakaHighCourt #PakistaniNational #VisaRules #LegalNews #UdayakalaNews #NelamangalaDetention #HabeasCorpus #BreakingNews

