Menu

ಮಾಲಿನ್ಯ  ನಿಯಮ ಉಲ್ಲಂಘಿಸಿದವರಿಗೆ 68.4 ಲಕ್ಷ ರೂಪಾಯಿ ದಂಡ ವಿಧಿಸಿದ ದೆಹಲಿ ಆಡಳಿತ

ಉದಯಕಾಲ ನ್ಯೂಸ್‌, ನವೆದೆಹಲಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ರಾಕ್ಷಸ ಮತ್ತೆ ಹೆಡೆಎತ್ತಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರವಾಗಿ ಕುಸಿದು ‘ಗಂಭೀರ’ ಹಾಗೂ ‘ತುಂಬಾ ಕಳಪೆ’ ವಿಭಾಗಕ್ಕೆ ತಲುಪಿದೆ. ಜಹಾಂಗೀರ್‌ಪುರಿ ಪ್ರದೇಶದಲ್ಲಿ AQI ಬ್ರಹ್ಮಾಂಡ ಮಟ್ಟವಾದ 417ಕ್ಕೆ ಏರಿಕೆಯಾಗಿದ್ದು, ನಗರದಾದ್ಯಂತ ದಟ್ಟವಾದ ಹೊಗೆ ಮತ್ತು ಮಂಜಿನ ವಾತಾವರಣ ಆವರಿಸಿದೆ.
ಚಳಿಗಾಲದ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿರುವ ಸರ್ಕಾರ, ಮೊದಲ ದಿನವೇ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು, ಒಟ್ಟು 68.4 ಲಕ್ಷ ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಿದೆ.

ಕಳೆದ ವಾರ ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದ ದೆಹಲಿಯ ಗಾಳಿಯ ಗುಣಮಟ್ಟ, ಇದೀಗ ಮರಳಿ ಹದಗೆಟ್ಟಿದೆ. ಸೋಮವಾರ ಬೆಳಗ್ಗಿನ ವೇಳೆಗೆ ದೆಹಲಿಯ ಸರಾಸರಿ AQI 310ಕ್ಕೆ ತಲುಪಿದ್ದರೆ, ಪ್ರಮುಖ ವಲಯವಾದ ಜಹಾಂಗೀರ್‌ಪುರಿಯಲ್ಲಿ ಇದು 417ಕ್ಕೆ ಏರಿಕೆಯಾಗಿ ಜನರ ಆರೋಗ್ಯದ ಮೇಲೆ ಗಂಭೀರ ಆತಂಕ ಮೂಡಿಸಿದೆ. ಭಾನುವಾರ 222ರಷ್ಟಿದ್ದ ಸರಾಸರಿ AQI, ಕೇವಲ ಒಂದೇ ದಿನದಲ್ಲಿ ಭಾರಿ ಕುಸಿತ ಕಂಡಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ. ಬೆಳಗಿನ ಸಮಯದಲ್ಲಿ ಉಂಟಾಗಿರುವ ದಟ್ಟ ಹೊಗೆಯಿಂದಾಗಿ ಜನಸಾಮಾನ್ಯರಿಗೆ ಕಣ್ಣು ಉರಿ ಹಾಗೂ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಚಳಿಗಾಲದ ಮಾಲಿನ್ಯ ನಿಯಂತ್ರಣ ಕಟ್ಟುನಿಟ್ಟು

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ವಿಶೇಷ ಚಳಿಗಾಲದ ಮಾಲಿನ್ಯ ನಿಗ್ರಹ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ವಾಹನಗಳ ಹೊಗೆ, ಧೂಳು ಮತ್ತು ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ನಗರದ ಪ್ರವೇಶ ದ್ವಾರಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ಅಳವಡಿಸಿ 24 ಗಂಟೆಯೂ ತಪಾಸಣೆ ನಡೆಸಲಾಗುತ್ತಿದೆ.

ಮೊದಲ ದಿನವೇ ಭಾರೀ ದಂಡಾಸ್ತ್ರ

ಮಾಲಿನ್ಯ ನಿಯಂತ್ರಣ ಯೋಜನೆಯ ಮೊದಲ ದಿನವೇ ಅಧಿಕಾರಿಗಳು ಭರ್ಟೆ ಕಾರ್ಯಾಚರಣೆ ನಡೆಸಿದ್ದು, ಒಟ್ಟು 68.4 ಲಕ್ಷ ರೂ. ದಂಡ ಹಾಗೂ ಪರಿಸರ ಪರಿಹಾರ ವಿಧಿಸಿದ್ದಾರೆ. ಸುಮಾರು 15 ಸಾವಿರ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿಲ್ಲದ ಹಾಗೂ ನಿಯಮ ಉಲ್ಲಂಘಿಸಿದ 1,539 ವಾಹನಗಳನ್ನು ಗಡಿಯಿಂದಲೇ ವಾಪಸ್ ಕಳುಹಿಸಲಾಗಿದೆ. ಅಲ್ಲದೆ, ಪಿಯುಸಿ ಉಲ್ಲಂಘನೆಗಾಗಿ ಬೋಪಾದಲ್ಲಿ 566 ಚಲನ್‌ಗಳನ್ನು ವಿಧಿಸಲಾಗಿದೆ.

ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುವಿನ ಸರಾಸರಿಗಿಂತ 1.9 ಡಿಗ್ರಿಯಷ್ಟು ಕಡಿಮೆಯಾಗಿದೆ. ಹಬ್ಬದ ದಿನಗಳಲ್ಲಿ ಮಾಲಿನ್ಯ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿರುವುದರಿಂದ ಆಡಳಿತ ಮಂಡಳಿ ಮುನ್ನೆಚ್ಚರಿಕೆ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
#DelhiPollution #AirQualityIndex #AQI417 #DelhiSmog #UdayakalaNews #WinterPollution #DelhiTrafficPolice #BreakingNews

Related Posts

Leave a Reply

Your email address will not be published. Required fields are marked *