Saturday, October 31, 2026
Menu

ಇಂಧನ ಶೇ.32ರಷ್ಟು ಹೆಚ್ಚಳ; ಬ್ಯಾರೆಲ್‌ ತೈಲ 91 ಡಾಲರ್‌ ಎಂದ ವಿಶ್ವ ಬ್ಯಾಂಕ್!

ಉದಯಕಾಲ ನ್ಯೂಸ್, ನವದೆಹಲಿ: ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ವಿಶ್ವದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರಸಕ್ತ 2026ನೇ ಸಾಲಿನಲ್ಲಿ ಜಾಗತಿಕವಾಗಿ ಇಂಧನ ಬೆಲೆಗಳು ಬರೋಬ್ಬರಿ ಶೇ.32ರಷ್ಟು ಏರಿಕೆಯಾಗಲಿವೆ ಎಂದು ‘ವಿಶ್ವ ಬ್ಯಾಂಕ್’ (World Bank) ತನ್ನ ಇತ್ತೀಚಿನ ವರದಿಯಲ್ಲಿ ಆತಂಕಕಾರಿ ಮುನ್ಸೂಚನೆ ನೀಡಿದೆ. ಇದು ಕಳೆದ ಮೂರು ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದ್ದ ಇಂಧನ ಬೆಲೆಯ ಟ್ರೆಂಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.

ಅಮೆರಿಕ-ಇರಾನ್ ನಡುವಿನ ಸಂಘರ್ಷ ಹಾಗೂ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ‘ಬ್ರೆಂಟ್’ ಕಚ್ಚಾ ತೈಲದ ಬೆಲೆ ಮುಗಿಲುಮುಟ್ಟಿದೆ. 2025ರಲ್ಲಿ ಪ್ರತಿ ಬ್ಯಾರೆಲ್‌ಗೆ 69 ಡಾಲರ್‌ನಷ್ಟಿದ್ದ ಕಚ್ಚಾ ತೈಲದ ಬೆಲೆ, ಪ್ರಸ್ತುತ 2026ರಲ್ಲಿ ಸರಾಸರಿ 91 ಡಾಲರ್‌ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ಇದು 2027ರಲ್ಲಿ 79 ಡಾಲರ್‌ಗೆ ಇಳಿಕೆಯಾಗಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಈ ಬೆಲೆ ಏರಿಕೆಯು ಜಾಗತಿಕ ಮಟ್ಟದಲ್ಲಿ ಹಣದುಬ್ಬರ, ಆಹಾರ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಇನ್ನಷ್ಟು ಹದಗೆಡಿಸುವ ಅಪಾಯವನ್ನು ತಂದೊಡ್ಡಿದೆ ಎಂದು ವಿಶ್ವ ಬ್ಯಾಂಕ್‌ನ ಉಪ ಮುಖ್ಯ ಅರ್ಥಶಾಸ್ತ್ರಜ್ಞ ಐಹಾನ್ ಕೋಸೆ ಎಚ್ಚರಿಸಿದ್ದಾರೆ.

ವಿಶ್ವ ಬ್ಯಾಂಕ್ ವರದಿ

ಆಹಾರ ಪದಾರ್ಥಗಳ ಬೆಲೆ ಜಿಗಿತ

ಮಧ್ಯಪ್ರಾಚ್ಯ ಬಿಕ್ಕಟ್ಟು, ‘ಎಲ್ ನಿನೋ’ ಪರಿಣಾಮ ಹಾಗೂ ಇಂಧನ-ರಸಗೊಬ್ಬರಗಳ ಬೆಲೆ ಹೆಚ್ಚಳದಿಂದಾಗಿ ಆಹಾರ ಪದಾರ್ಥಗಳ ಬೆಲೆಗಳು 2026ರಲ್ಲಿ ಶೇ.10ರಷ್ಟು ಮತ್ತು 2027ರಲ್ಲಿ ಮತ್ತೆ ಶೇ.7ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ತೈಲ ಪೂರೈಕೆಯಲ್ಲಿ ಭಾರಿ ಕುಸಿತ

2026ರಲ್ಲಿ ಜಾಗತಿಕ ತೈಲ ಪೂರೈಕೆಯು ಶೇ.5.2ರಷ್ಟು ಕುಸಿಯಲಿದ್ದು, 2020ರ ಜಾಗತಿಕ ಆರ್ಥಿಕ ಹಿಂಜರಿತದ ನಂತರದ ಕಳೆದ ನಾಲ್ಕು ದಶಕಗಳಲ್ಲಿಯೇ ಇದು ಅತಿ ದೊಡ್ಡ ಕುಸಿತವಾಗಿದೆ. ಪವರ್ ಗ್ರಿಡ್‌ಗಳು ಹಾಗೂ ಡೇಟಾ ಸೆಂಟರ್‌ಗಳಿಂದ ತಾಮ್ರಕ್ಕೆ ಅಪಾರ ಬೇಡಿಕೆ ಇರುವುದರಿಂದ, 2027ರಲ್ಲಿ ತಾಮ್ರದ ಬೆಲೆಯು ಪ್ರತಿ ಟನ್‌ಗೆ ಬರೋಬ್ಬರಿ 13,000 ಡಾಲರ್‌ಗೆ ತಲುಪಲಿದೆ. ಆದರೆ ಚಿನ್ನದ ಬೆಲೆ ಶೇ.7.6ರಷ್ಟು ಕಡಿಮೆಯಾಗಿ ಪ್ರತಿ ಔನ್ಸ್‌ಗೆ 4,250 ಡಾಲರ್ ಇರಲಿದೆ.2026ರಲ್ಲಿ ರಸಗೊಬ್ಬರಗಳ ಬೆಲೆ ಶೇ.14ರಷ್ಟು ಹೆಚ್ಚಾಗಲಿದ್ದು, ಇದು ರೈತರ ಮೇಲಿನ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
#WorldBank #GlobalInflation #CrudeOilPrice #EnergyPrices #MiddleEastCrisis #UdayakalaNews #EconomyNews #CopperPrice

Related Posts

Leave a Reply

Your email address will not be published. Required fields are marked *