ಉದಯಕಾಲ ನ್ಯೂಸ್, ಬೆಂಗಳೂರು: ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಸರ್ಕಾರದ ವಿರೋಧಿ ಹಾಗೂ ಟೀಕಾತ್ಮಕ ಪೋಸ್ಟ್ಗಳ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಪ್ರತಿದಿನ ಸಾವಿರಾರು ಪೋಸ್ಟ್ಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದೆ ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ಪೋಸ್ಟ್ಗಳನ್ನು ಡಿಲೀಟ್ ಮಾಡಿದ ಮಾತ್ರಕ್ಕೆ ಜನರ ಪ್ರಶ್ನೆಗಳು ಮಾಯವಾಗುವುದಿಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮುಂದುವರಿದ ಕಂಟೆಂಟ್ ಸೆನ್ಸಾರ್ಶಿಪ್
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧದ ದ್ವನಿಗಳನ್ನು ಹತ್ತಿಕ್ಕುವ ಪ್ರಯತ್ನಗಳು ಜೋರಾಗಿವೆ. ಸರ್ಕಾರದ ವಿಮರ್ಶಕರ ಪೋಸ್ಟ್ಗಳು ಒಂದೊಂದಾಗಿ ಮಂಗಮಾಯವಾಗುತ್ತಿವೆ. ಇನ್ಸ್ಟಾಗ್ರಾಂ ವಿರುದ್ಧದ ಈ ಕಠಿಣ ಕ್ರಮಗಳು ಫಲ ನೀಡುವುದಿಲ್ಲ ಎಂದು ಅಭಿಜಿತ್ ದೀಪ್ಕೆ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂ ಕೇವಲ ಒಂದು ಮಾಧ್ಯಮವಾಗಿದ್ದು, ಅಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಪ್ರಶ್ನಿಸುತ್ತಿದ್ದಾರೆ. ಆ ಪ್ರಶ್ನೆಗಳ ಹಿಂದಿನ ಕಾರಣಗಳು ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯನ್ನು ಮೀರಿದ್ದಾಗಿವೆ. ಹೀಗಾಗಿ ಖಾತೆಗಳು ಅಥವಾ ಪೋಸ್ಟ್ಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಸತ್ಯ ಹಾಗೂ ಸಮಸ್ಯೆಗಳು ಮರೆಯಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಈ ಸೆನ್ಸಾರ್ಶಿಪ್ ಧೋರಣೆಯು ಸರ್ಕಾರಿ ವ್ಯವಸ್ಥೆ ಮತ್ತು ಜನರ ನಡುವೆ ಮತ್ತಷ್ಟು ಅಪನಂಬಿಕೆಯನ್ನು ಸೃಷ್ಟಿಸಲಿದೆ ಎಂದು ದೀಪ್ಕೆ ಅಭಿಪ್ರಾಯಪಟ್ಟಿದ್ದಾರೆ. ದೀಪ್ಕೆ ಅವರ ಸಹವರ್ತಿ ಅಶುತೋಷ್ ರಂಕಾ ಕೂಡ ಭಾರತದಲ್ಲಿ ಸಾವಿರಾರು ಇನ್ಸ್ಟಾಗ್ರಾಂ ಖಾತೆಗಳು ನಿರ್ಬಂಧಕ್ಕೊಳಗಾಗಿವೆ ಎಂದು ದೂರಿದ್ದಾರೆ.
ಗೀತರಚನೆಕಾರ ವರುಣ್ ಗ್ರೋವರ್ ಪೋಸ್ಟ್ಗಳೂ ನಾಪತ್ತೆ!
ಕೇವಲ ರಾಜಕೀಯ ಕಾರ್ಯಕರ್ತರಷ್ಟೇ ಅಲ್ಲದೆ, ಪ್ರಮುಖ ಮಾಧ್ಯಮ ಸಂಸ್ಥೆಗಳು ಹಾಗೂ ಕಲೆಗಾರರ ಕಂಟೆಂಟ್ ಕೂಡ ಬಲಿಪಶುವಾಗಿದೆ. ಕಾನೂನು ಸುದ್ದಿಗಳ ಪ್ರಮುಖ ವೆಬ್ಸೈಟ್ ‘ಲೈವ್ಲಾ’ (LiveLaw), ಸುಪ್ರೀಂ ಕೋರ್ಟ್ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ರೀಲ್ ಅನ್ನು ಕಾನೂನುಬದ್ಧ ವಿನಂತಿಯ ಮೇರೆಗೆ ತೆಗೆದುಹಾಕಲಾಗಿದೆ ಎಂದು ಬಹಿರಂಗಪಡಿಸಿದೆ. ಚುನಾವಣಾ ಆಯೋಗದ ನಿಲುವನ್ನು ವಿವರಿಸುವ ಕಂಟೆಂಟ್ ಕೂಡ ನಿರ್ಬಂಧಕ್ಕೊಳಗಾಗಿರುವುದು ಆತಂಕ ಮೂಡಿಸಿದೆ.
ಇದಲ್ಲದೆ, ಸರ್ಕಾರದ ‘2047ರ ವಿಕಸಿತ ಭಾರತ’ದ ಭರವಸೆಯ ಕುರಿತು ವಿಡಂಬನಾತ್ಮಕ ಕವಿತೆ ಬರೆದಿದ್ದ ಗೀತರಚನೆಕಾರ ಹಾಗೂ ವ್ಯಂಗ್ಯಚಿತ್ರಕಾರ ವರುಣ್ ಗ್ರೋವರ್ ಅವರ ಪೋಸ್ಟ್ ಅನ್ನು ಸಹ ಐಟಿ ಕಾಯ್ದೆಯ ಅಡಿಯಲ್ಲಿ ಇನ್ಸ್ಟಾಗ್ರಾಂ ಬ್ಲಾಕ್ ಮಾಡಿದೆ. ‘ಈ ಮುಗ್ಧ ಕವಿತೆಯನ್ನು ಹೇಡಿ ಸರ್ಕಾರ ತೆಗೆದುಹಾಕಿದೆ’ ಎಂದು ವರುಣ್ ಗ್ರೋವರ್ ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬ ವಿಡಂಬನಕಾರ ‘ದೇಶಭಕ್ತ’ ಕೂಡ ಸರ್ಕಾರದ ಅತಿಯಾದ ಸಹನೆ ಕಳೆದುಕೊಳ್ಳುತ್ತಿರುವ ಧೋರಣೆಯನ್ನು ಟೀಕಿಸಿದ್ದಾರೆ. ನೀಟ್ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳ ಮೂಲಕ ಜನಪ್ರಿಯತೆ ಪಡೆದ ‘ಸಿಜೆಪಿ’ ಈಗ ಸಾಮಾಜಿಕ ಜಾಲತಾಣಗಳ ವಾಕ್ ಸ್ವಾತಂತ್ರ್ಯದ ಕಡಿತದ ವಿರುದ್ಧ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತುತ್ತಿರುವುದು ಗಮನಾರ್ಹವಾಗಿದೆ.
#CJP #AbhijeetDeepke #InstagramCensorship #LiveLaw #Sandalwood #UdayakalaNews #FreedomOfSpeech #ModiGovernment


