Menu

ಕಾನೂನುಬದ್ಧ ಮಾಂಸ ಸಾಗಣೆ ಅಡ್ಡಿಗೆ 10 ವರ್ಷ ಜೈಲು: ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

ಉದಯಕಾಲ ನ್ಯೂಸ್, ಮಂಗಳೂರು: ಕಾನೂನು ಪ್ರಕಾರ ಪರವಾನಿಗೆ ಪಡೆದು ನಡೆಸುವ ಮಾಂಸದ ಸಾಗಣೆ ಮತ್ತು ಮಾರಾಟಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಥವಾ ವಾಹನಗಳನ್ನು ಮಾರ್ಗಮಧ್ಯೆ ಅಡ್ಡಗಟ್ಟಿದರೆ ಅವರ ವಿರುದ್ಧ ಗಂಭೀರ ಅಪರಾಧ ಪ್ರಕರಣ ದಾಖಲಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅಂತಹ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ರೀತಿಯ ಅಕ್ರಮ ಗೋಹತ್ಯೆ ಅಥವಾ ಅಕ್ರಮ ಜಾನುವಾರು ಸಾಗಣೆ ಕಂಡುಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಅಧಿಕೃತ ಪರವಾನಿಗೆ ಪಡೆದು ಕಾನೂನುಬದ್ಧವಾಗಿ ನಡೆಯುವ ಮಾಂಸ ಸಾಗಣೆ ಹಾಗೂ ಮಾರಾಟವನ್ನು ತಡೆಯುವುದು ಗಂಭೀರ ಅಪರಾಧವಾಗಿದೆ.

ಕೇರಳದ ಮಾಂಸ ವಾಹನ ಪರಿಶೀಲನೆ

ಇತ್ತೀಚೆಗೆ ಮಂಗಳೂರಿಗೆ ತರಲಾಗುತ್ತಿದ್ದ ಮಾಂಸದ ವಾಹನದ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸದರಿ ಮಾಂಸವನ್ನು ಕೇರಳದಿಂದ ಖರೀದಿಸಿ, ಇಲ್ಲಿನ ಅಧಿಕೃತ ಪರವಾನಿಗೆ ಹೊಂದಿರುವ ಮಾಂಸದ ಅಂಗಡಿಗೆ ಸಾಗಿಸಲಾಗುತ್ತಿತ್ತು ಎಂಬುದು ದೃಢಪಟ್ಟಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಅಧಿಕೃತ ಪರವಾನಿಗೆಯೊಂದಿಗೆ ಸಾಗಿಸಲಾಗುವ ವಾಹನಗಳನ್ನು ಅಕ್ರಮವಾಗಿ ತಡೆಯುವುದು, ಬೆದರಿಕೆ ಹಾಕುವುದು ಅಥವಾ ಹಲ್ಲೆಗೆ ಮುಂದಾಗುವುದು ಕಾನೂನಿನ ದೃಷ್ಟಿಯಲ್ಲಿ ಗಂಭೀರ ಅಪರಾಧ. ಇಂತಹ ಕೃತ್ಯವೆಸಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸೋಮವಾರ ಬೆಳಗಿನ ಜಾವ ಮಾಂಸದ ವಾಹನವನ್ನು ಕೆಲವರು ಅಕ್ರಮವಾಗಿ ತಡೆಯಲು ಯತ್ನಿಸಿರುವ ಕುರಿತು ದೂರು ಬಂದಿದ್ದು, ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ವಾಹನ ಅಡ್ಡಗಟ್ಟಿ ಕಾನೂನು ಕೈಗೆತ್ತಿಕೊಂಡಿರುವುದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರ ಮನವಿ

ಯಾರಾದರೂ ಅಕ್ರಮ ಗೋಹತ್ಯೆ ಅಥವಾ ಜಾನುವಾರು ಸಾಗಣೆಯ ಬಗ್ಗೆ ಮಾಹಿತಿ ಹೊಂದಿದ್ದರೆ, ಅವರು ನೇರವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಪೊಲೀಸರೇ ಅಂತಹ ಪ್ರತಿಯೊಂದು ಪ್ರಕರಣವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಅದನ್ನು ಬಿಟ್ಟು ಸಾರ್ವಜನಿಕರು ಅಥವಾ ಸಂಘಟನೆಗಳ ಕಾರ್ಯಕರ್ತರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

#MangaluruPolice #SudheerKumarReddy #MeatTransport #LawAndOrder #UdayakalaNews #KarnatakaCrime #MangaluruNews #PoliceWarning

Related Posts

Leave a Reply

Your email address will not be published. Required fields are marked *