Menu

ಕಬ್ಬು ಬೆಳೆಗಾರರ ಬಿಕ್ಕಟ್ಟು ಶಮನಗೊಳಿಸಿದ ಟ್ರಬಲ್ ಶೂಟರ್ ಸಿಎಂ ಡಿ.ಕೆ. ಶಿವಕುಮಾರ್!

ಉದಯಕಾಲ ನ್ಯೂಸ್, ಬೆಳಗಾವಿ: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಂಘರ್ಷಕ್ಕೆ ತೆರೆ ಎಳೆಯುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐತಿಹಾಸಿಕ ಯಶಸ್ಸು ಸಾಧಿಸಿದ್ದಾರೆ. ಬೆಳಗಾವಿಯ ಸುವರ್ಣಸೌಧ ಹಾಗೂ ಸರ್ಕಿಟ್ ಹೌಸ್‌ನಲ್ಲಿ ಭಾನುವಾರ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ನಡೆದ ಸುಮಾರು 10 ಗಂಟೆಗಳ ಸುದೀರ್ಘ, ಐದು ಸುತ್ತಿನ ಸಭೆಗಳ ಮೂಲಕ ಬಿಕ್ಕಟ್ಟಿಗೆ ಯಶಸ್ವಿ ಸಂಧಾನ ಸೂತ್ರ ರೂಪಿಸಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ರೈತರು ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ನೇರವಾಗಿ ಸಭೆ ನಡೆಸಿ, ಇಬ್ಬರ ಪಟ್ಟುಗಳನ್ನೂ ಸಮರ್ಥವಾಗಿ ನಿಭಾಯಿಸಿ ಸಮಸ್ಯೆ ಬಗೆಹರಿಸುವ ಮೂಲಕ ಮಾದರಿಯಾಗಿದ್ದಾರೆ.

ಮ್ಯಾರಥಾನ್ ಕಬ್ಬು ಬೆಳೆಗಾರರ ಸಭೆ

ಬೆಳಗ್ಗೆ 11 ಗಂಟೆಯಿಂದ ಮಧ್ಯರಾತ್ರಿವರೆಗೂ ನಡೆದ ಸಭೆಯಲ್ಲಿ 9 ಸಚಿವರು, 70 ಶಾಸಕರು ಹಾಗೂ 80ರ ಪೈಕಿ 79 ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗವಹಿಸಿದ್ದರು. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ಯಶವಂತರಾಯ ಗೌಡ ಪಾಟೀಲ್, ಶಾಸಕ ಎನ್.ಎಹ್. ಕೋನರೆಡ್ಡಿ ಹಾಗೂ ಬಡಗಲಪುರ ನಾಗೇಂದ್ರ, ಚೂನಪ್ಪ ಪೂಜಾರಿ, ಕುರುಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಪ್ರಮುಖ ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಧಾನ ಸೂತ್ರ ಏನು

ಕೇಂದ್ರ ಸರ್ಕಾರ ಸಕ್ಕರೆ ಕನಿಷ್ಠ ಮಾರಾಟ ಬೆಲೆ (MSP) ನಿಗದಿ ಮಾಡಿದ ಬಳಿಕ, ಅದಕ್ಕೆ ಅನುಗುಣವಾಗಿ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ದರದ ಬಗ್ಗೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರೈತರು ತಮ್ಮೊಳಗೆ ಚರ್ಚಿಸಿ ಮುಂದಿನ ಎರಡು ದಿನಗಳಲ್ಲಿ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಅವರ ಬದ್ಧತೆ

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ರೈತರು ಮತ್ತು ಕಾರ್ಖಾನೆಗಳೆರಡೂ ಸರ್ಕಾರದ ಕಣ್ಣಿಗೆ ಸಮಾನ ಎಂಬುದನ್ನು ಸ್ಪಷ್ಟಪಡಿಸಿದರು. ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಅತ್ಯಂತ ಮುಖ್ಯ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜತೆಗೆ ಅವರೂ ಮಾತನಾಡುತ್ತಾರೆ, ನಾವೂ ಮಾತನಾಡುತ್ತೇವೆ. ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ.
ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ತೋರಿಸಿದ ಈ ದಿಟ್ಟ ನಾಯಕತ್ವ ಹಾಗೂ ತಾಳ್ಮೆಯ ಸಂಧಾನ ಸೂತ್ರಕ್ಕೆ ರಾಜ್ಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
#CMDKShivakumar #SugarcaneIssue #Belagavi #KarnatakaGovt #FarmersProtest #SuvarnaSoudha #UdayakalaNews #KarnatakaPolitics

Related Posts

Leave a Reply

Your email address will not be published. Required fields are marked *