Saturday, October 24, 2026
Menu

ಕೆಎಸ್‌ಒಯು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲು – ಎಬಿವಿಪಿಯಿಂದ ಕಚೇರಿಗೆ ಮುತ್ತಿಗೆ ಯತ್ನ!

ಉದಯಕಾಲ ನ್ಯೂಸ್, ಶಿವಮೊಗ್ಗ: ನಗರದ ಆಲ್ಕೋಳ ವೃತ್ತದ ಸಮೀಪವಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ಅಕ್ರಮದ ದೊಡ್ಡ ಜಾಲವು ಬಯಲಾಗಿದೆ. ಹಣ ಪಡೆದು ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಪುಸ್ತಕಗಳನ್ನು ಇಟ್ಟುಕೊಂಡು ಮುಕ್ತವಾಗಿ ನಕಲು ಮಾಡಲು ಅವಕಾಶ ಕಲ್ಪಿಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಆಕ್ರೋಶಗೊಂಡ ಎಬಿವಿಪಿ (ABVP) ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಹಣ ಕೊಟ್ಟರೆ ವಿಐಪಿ ವ್ಯವಸ್ಥೆ: ಬಯಲಾಯ್ತು ಅಕ್ರಮದ ಕರಾಳ ಮುಖ

ಮಾಧ್ಯಮ ವರದಿಗಳ ಪ್ರಕಾರ, ಕೆಎಸ್‌ಒಯು ಪರೀಕ್ಷಾ ಕೇಂದ್ರದಲ್ಲಿ ಹಣ ನೀಡಿದವರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಿ, ನಕಲು ಮಾಡಲು ಮುಕ್ತ ಅವಕಾಶ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪವಿದ್ದು, ಇದರ ವಿವರಗಳು ಹೀಗಿವೆ
ಒಂದು ವಿಷಯದ ಪರೀಕ್ಷೆಗೆ ₹1,000 ನೀಡುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಎರಡನೇ ಮಹಡಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು. ಇಲ್ಲಿ ಯಾವುದೇ ಭಯವಿಲ್ಲದೆ ಸ್ಮಾರ್ಟ್‌ಫೋನ್‌ಗಳು, ಗೈಡ್‌ಗಳು ಹಾಗೂ ಪುಸ್ತಕಗಳನ್ನು ಎದುರಿಗೇ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಕ್ತ ಅವಕಾಶವಿತ್ತು ಎನ್ನಲಾಗಿದೆ.ಯಾವುದೇ ಹಣ ನೀಡದೆ ಪ್ರಾಮಾಣಿಕವಾಗಿ ಬರೆಯಲು ಬರುವ ಬಡ ವಿದ್ಯಾರ್ಥಿಗಳಿಗೆ ಮೊದಲ ಮಹಡಿಯಲ್ಲಿ ಕಟ್ಟುನಿಟ್ಟಿನ ನಿಗಾದಡಿ ಪರೀಕ್ಷೆ ಬರೆಸಲಾಗುತ್ತಿತ್ತು.

ಪ್ರಾದೇಶಿಕ ನಿರ್ದೇಶಕರ ಮೇಲಿನ ಆರೋಪ

ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಅವರ ನೇತೃತ್ವದಲ್ಲೇ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಹಾಗೂ ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳಿಂದ ಡಿಜಿಟಲ್ ವ್ಯಾಲೆಟ್ (PhonePe/Google Pay) ಮೂಲಕ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ.ಆದರೆ, ಈ ಎಲ್ಲಾ ಆರೋಪಗಳನ್ನು ಪ್ರಾದೇಶಿಕ ನಿರ್ದೇಶಕರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಕಚೇರಿಗೆ ದಾಳಿಯಿಟ್ಟ ಎಬಿವಿಪಿ

ಪರೀಕ್ಷಾ ಅಕ್ರಮದ ದೃಶ್ಯಾವಳಿಗಳು ಮತ್ತು ಮಾಹಿತಿ ಹೊರಬರುತ್ತಿದ್ದಂತೆ ಆಕ್ರೋಶಗೊಂಡ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು, ಆಲ್ಕೋಳ ಸರ್ಕಲ್ ಬಳಿಯಿರುವ ಕೆಎಸ್‌ಒಯು ಪ್ರಾದೇಶಿಕ ಕಚೇರಿಯ ಎದುರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಕಚೇರಿಯ ಒಳಗೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚೆತ್ತ ಪೊಲೀಸರು ಪ್ರಾದೇಶಿಕ ಕಚೇರಿ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪರೀಕ್ಷಾ ಅಕ್ರಮದ ಹಿಂದೆ ಇರುವ ಪ್ರಾದೇಶಿಕ ನಿರ್ದೇಶಕರು ಹಾಗೂ ಸಂಬಂಧಿಸಿದ ಇಲಾಖಾ ಸಿಬ್ಬಂದಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರದಿಂದ ಕೂಡಿದ ಈ ಪರೀಕ್ಷೆಯನ್ನು ರದ್ದುಪಡಿಸಿ, ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆ ಕೂಡಲೇ ಮರುಪರೀಕ್ಷೆ ನಡೆಸಬೇಕು ಎಂದು ಎಬಿವಿಪಿ ಹಾಗೂ ವಿದ್ಯಾರ್ಥಿ ಮುಖಂಡರು ಆಗ್ರಹಿಸಿದ್ದಾರೆ.
#KSOUExamScam #Shivamogga #ABVPProtest #MassCopying #UdayakalaNews #KarnatakaEducation #KSOU #ShivamoggaNews #ExamMalpractice #StudentProtest

Related Posts

Leave a Reply

Your email address will not be published. Required fields are marked *