ಉದಯಕಾಲ ನ್ಯೂಸ್,ಕಾರವಾರ: ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಲಹ ಮತ್ತೊಮ್ಮೆ ಭುಗಿಲೆದ್ದಿದ್ದು, ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್, ಸ್ವಜಾತಿ ನಾಯಕರೇ ತಮ್ಮನ್ನು ರಾಜಕೀಯವಾಗಿ ಮುಗಿಸಲು ನೋಡಿದ ಕಾರಣ ತಾನು ಪಕ್ಷದಿಂದ ಹೊರ ಬಂದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣವಿಲ್ಲದೆ ಯಾರೂ ಪಕ್ಷ ಬಿಡುವುದಿಲ್ಲ. ಅದರ ಹಿಂದೆ ಬಲವಾದ ಕಾರಣಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಗನಿಂದ ಹೇಗೆ ತೊಂದರೆಯಾಗಿದೆಯೋ, ಅದೇ ರೀತಿ ತಮಗೆ ಜಿಲ್ಲೆಯಲ್ಲಿ ಇನ್ನೊಬ್ಬರಿಂದ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ವಜಾತಿ ನಾಯಕರೇ ಸೋಲಿಸಲು ನೋಡಿದರು
ಚುನಾವಣಾ ರಾಜಕೀಯದ ಕಹಿ ಅನುಭವ ಹಂಚಿಕೊಂಡ ಹೆಬ್ಬಾರ್, ಯಾವ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದೆನೋ, ಅದೇ ಬಿಜೆಪಿ ಪಕ್ಷದ ಕೆಲವರು ಹಗಲು-ರಾತ್ರಿ ಶ್ರಮಪಟ್ಟು ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಈ ಸಮಾಜದಿಂದ (ಬ್ರಾಹ್ಮಣ ಸಮಾಜ) ಗೆದ್ದು ಬಂದರೆ ತಮಗೆ ತಮ್ಮ ಸಮಾಜದಿಂದ ಸಿಗುವ ಮಂತ್ರಿ ಪಟ್ಟ ತಪ್ಪಿಹೋಗುತ್ತದೆ ಎಂಬ ಅಸೂಯೆಯಿಂದ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಅದಕ್ಕೆ ಅವರು ಈಗ ಪಶ್ಚಾತಾಪ ಪಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನಾಯಕತ್ವ ಹಾಗೂ ಅನುಭವದ ಕೊರತೆಯಿಂದ ಬಿಜೆಪಿ ಪತನ!
ಬಿಜೆಪಿ ರಾಜ್ಯ ನಾಯಕತ್ವ ಮತ್ತು ಸಂಘಟನೆಯ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡ ಅವರು, 65ರ ವಯಸ್ಸಿಗೆ ಬಂದವರೆಲ್ಲಾ ಸರ್ಕಾರ ಮಾಡುತ್ತೇವೆ ಎಂಬ ಕನಸು ಕಾಣುತ್ತಾರೆ. ಆ ಅನುಭವದ ಕೊರತೆಯ ಕಾರಣದಿಂದಲೇ ಕರ್ನಾಟಕದಲ್ಲಿ ಬಿಜೆಪಿ ಹಾಳಾಯ್ತು ಎಂದು ನೇರ ಆರೋಪ ಮಾಡಿದರು. ಜಿಲ್ಲೆಯ ಸಂಘಟನೆಯಲ್ಲಿ ಬಹಳ ದೊಡ್ಡ ಲೋಪಗಳಿವೆ ಎಂದ ಅವರು, ಪಕ್ಷದಲ್ಲಿ ತಮ್ಮಂತಹ ಅನುಭವಿ ನಾಯಕರಿಗೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಮಾನ ಮನಸ್ಕರ ಒಕ್ಕೂಟ ಹಾಗೂ ಮುಂದಿನ ಹೆಜ್ಜೆ
ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ. ಸೋಮಶೇಖರ್ ಹಾಗೂ ತಮ್ಮ ನಡುವಿನ ಒಡನಾಟದ ಬಗ್ಗೆ ಮಾತನಾಡುತ್ತಾ, ನಾವೆಲ್ಲಾ ಸಮಾನ ಮನಸ್ಕರು. ಒಂದೇ ಟೇಬಲ್ ಮೇಲೆ ನಾನು, ಸೋಮಶೇಖರ್, ಯತ್ನಾಳ್ ಕೂತು ಉಂಡಿದ್ದೇವೆ. ಇದರ ಸಾಲಿನಲ್ಲಿ ಮೈಸೂರಿನ ಜಿ.ಟಿ.ದೇವೇಗೌಡರೂ ಬರುತ್ತಾರೆ. ಹಾಗಾಗಿ ನಮ್ಮದೇ ಒಂದು ದೊಡ್ಡ ಪಾರ್ಟಿಯೇ ಇದೆ ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷದ ವರಿಷ್ಠರ ಧೋರಣೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹೆಬ್ಬಾರ್, ಇವರಿಗೆ ನಾವು ಬೇಡವಾದಾಗ ನಮಗೇನು ಅವಶ್ಯಕತೆ ಇದೆ? ಅವರಿಗೆ ನಾವು ಬೇಕು ಅಂದಾಗ ನಮಗೂ ಅವರು ಬೇಕು. ಬೇಡ ಅಂದ್ಮೇಲೆ ನಮಗೆ ಅವರು ಬೇಡ. ಮುಂದೆ ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಂದಿನ ರಾಜಕೀಯ ನಡೆ ಕುರಿತು ಸ್ಪಷ್ಟ ಸುಳಿವು ನೀಡಿದ್ದಾರೆ.
#ShivaramHebbar #BJPKarnataka #KarnatakaPolitics #Yatnal #UdayakalaNews #RebelMLAs #BSYediyurappa #PoliticalNews #BJPRebels


