ಉದಯಕಾಲ ನ್ಯೂಸ್, ಹುಬ್ಬಳ್ಳಿ: ಮಾರಕ ಮಾನವನ ಪ್ರಾಣ ತೆಗೆಯುವ ಮಾಂಜಾ ದಾರ ಮಾರಾಟ ಮಾಡುವವರ ಹಾಗೂ ಬಳಸುವವರ ವಿರುದ್ಧ ಪೊಲೀಸರು ಸಮರ ಸಾರಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವ್ಯಾಪ್ತಿಯಲ್ಲಿ ಒಟ್ಟು 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಮಾಂಜಾ ದಾರದಿಂದಾಗಿ ಮಹಿಳೆಯೊಬ್ಬರು ತನ್ನ ಜೀವ ಕಳೆದುಕೊಂಡಿರುವ ದಾರುಣ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಸಾಕಷ್ಟು ಜಾಗೃತಿ ಮೂಡಿಸಿದರೂ ಇಂತಹ ದುರ್ಘಟನೆ ನಡೆದಿರುವುದು ಖಂಡನೀಯ ಎಂದ ಅವರು, ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಕರಣದ ವಿವರ
ಅವಳಿ ನಗರದ ವಿವಿಧೆಡೆ ದಾಳಿ ನಡೆಸಿ, ಮಾಂಜಾ ದಾರ ಮಾರಾಟ ಮಾಡುತ್ತಿದ್ದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 120ಬಿ ಅಡಿಯಲ್ಲಿ ಒಟ್ಟು 12 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿನ್ನೆ ಸಂಜೆ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಮಾಂಜಾ ದಾರದಿಂದ ಬೈಕ್ ಸವಾರನ ಮೂಗಿಗೆ ಗಂಭೀರ ಗಾಯವಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿಯೂ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ದುರ್ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ, ಆ ಸಮಯದಲ್ಲಿ ಯಾರೂ ನೇರವಾಗಿ ಗಾಳಿಪಟ ಹಾರಿಸುತ್ತಿರಲಿಲ್ಲ. ಆದರೆ, ಮರದಲ್ಲಿ ಮೂರ್ನಾಲ್ಕು ಗಾಳಿಪಟಗಳು ಸಿಲುಕಿಕೊಂಡಿದ್ದು, ಅದರಲ್ಲಿ ಒಂದರ ದಾರ ಹಾರಿ ರಸ್ತೆ ಮೇಲೆ ಬಂದಿದ್ದರಿಂದ ಈ ಪ್ರಾಣಹಾನಿ ಸಂಭವಿಸಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ತೆರವು ಕಾರ್ಯಾಚರಣೆ ಹಾಗೂ ಸಾರ್ವಜನಿಕರಿಗೆ ಮನವಿ
ಮಾಂಜಾ ದಾರ ಹಾವಳಿ ತಡೆಯಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ವಿದ್ಯುತ್ ಕಂಬಗಳು ಹಾಗೂ ಗಿಡಮರಗಳಲ್ಲಿ ಜೋತುಬಿದ್ದಿರುವ ಮಾಂಜಾ ದಾರವನ್ನು ತೆರವುಗೊಳಿಸಲು ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಪಾಲಿಕೆ ಮತ್ತು ಹೆಸ್ಕಾಂ (HESCOM) ಸಹಕಾರದೊಂದಿಗೆ ಈ ದಾರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಸಾರ್ವಜನಿಕರು ಯಾರೇ ಮಾಂಜಾ ದಾರ ಬಳಕೆ ಮಾಡುವುದನ್ನು ಅಥವಾ ಮಾರಾಟ ಮಾಡುವುದನ್ನು ಕಂಡ ತಕ್ಷಣವೇ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ. ಪ್ರಾಣಹಾನಿಗೆ ಕಾರಣವಾಗುವ ಮಾಂಜಾ ದಾರ ಮಾರಾಟ ಮತ್ತು ಬಳಕೆಯ ವಿರುದ್ಧದ ಈ ಕಾರ್ಯಾಚರಣೆ ಮುಂದೆಯೂ ಕಠಿಣವಾಗಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
#HubballiDharwad #ManjaThreadBan #BhushanBorase #PoliceAction #UdayakalaNews #KarnatakaNews #PublicSafety #HubballiPolice #Karnatakagovt


