ನಗೋಯಾ (ಜಪಾನ್): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ಒಲಿದುಬಂದಿದೆ. ಮಹಿಳೆಯರ ಡಿಸ್ಕಸ್ ಥ್ರೋ F54 ವಿಭಾಗದಲ್ಲಿ ಭಾರತದ ಅನುಭವಿ ಪ್ಯಾರಾ-ಅಥ್ಲೀಟ್ ಸುವರ್ಣ ರಾಜ್ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತುಕ್ಕುವ ಮೂಲಕ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಜಪಾನ್ನ ನಗೋಯಾದಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ 44 ವರ್ಷದ ಸುವರ್ಣ ರಾಜ್, 15.66 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಪ್ರಥಮ ಸ್ಥಾನ ಪಡೆದುಕೊಂಡರು.
ಐದನೇ ಪ್ರಯತ್ನಕ್ಕೆ ಒಲಿದ ಚಿನ್ನದ ಪದಕ
ತಮ್ಮ ಆರು ಪ್ರಯತ್ನಗಳಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ನಿರಂತರ ಉತ್ತಮ ಪ್ರದರ್ಶನ ತೋರಿದ ಸುವರ್ಣ ರಾಜ್, ನಾಲ್ಕು ಬಾರಿ 15 ಮೀಟರ್ಗಿಂತ ಹೆಚ್ಚಿನ ದೂರಕ್ಕೆ ಡಿಸ್ಕಸ್ ಎಸೆದರು. ನಿರ್ಣಾಯಕ ಎನಿಸಿದ ಐದನೇ ಪ್ರಯತ್ನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ (15.66 ಮೀ) ನೀಡುವ ಮೂಲಕ ಅವರು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು.
ಈ ಸ್ಪರ್ಧೆಯಲ್ಲಿ ಇರಾನ್ನ ಶಹ್ಲಾ ಹಡಿಡಿ 15.45 ಮೀಟರ್ ಎಸೆದು ಬೆಳ್ಳಿ ಪದಕ ಪಡೆದರೆ, ವಿಯೆಟ್ನಾಂನ ಥಿ ಎನ್ಗೋಕ್ ಥುಯ್ ನ್ಗುಯೆನ್ 14.65 ಮೀಟರ್ ದೂರದೊಂದಿಗೆ ಕಂಚಿನ ಪದಕ ವಹಿಸಿಕೊಂಡರು. ಚಿನ್ನ ಹಾಗೂ ಬೆಳ್ಳಿ ಪದಕ ವಿಜೇತರ ನಡುವೆ ಕೇವಲ 21 ಸೆಂಟಿಮೀಟರ್ಗಳ ಅಂತರವಿತ್ತು ಎಂಬುದು ಪಂದ್ಯದ ರೋಚಕತೆಗೆ ಸಾಕ್ಷಿಯಾಗಿದೆ. ಕಳೆದ 2022ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿದ್ದ ಹಿನ್ನಡೆಗಳನ್ನು ಮೆಟ್ಟಿನಿಂತು ಸುವರ್ಣ ಈ ಬಾರಿ ಚಿನ್ನದ ಕಿರೆಟ ತೊಟ್ಟಿದ್ದಾರೆ.
ಸಾಧನೆಯ ಹಾದಿ ಮತ್ತು ಸಂದ ಪ್ರಶಸ್ತಿಗಳು
2017ರಲ್ಲಿ ತಮ್ಮ ಪ್ಯಾರಾ-ಅಥ್ಲೆಟಿಕ್ಸ್ ಪ್ರಯಾಣ ಆರಂಭಿಸಿದ ಸುವರ್ಣ ರಾಜ್, ಕಠಿಣ ಪರಿಶ್ರಮದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದುಬೈನಲ್ಲಿ ನಡೆದ ಫಾಝಾ ಇಂಟರ್ನ್ಯಾಷನಲ್ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಟ್ರ್ಯಾಕ್ ಮೀಟ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದ್ದ ಇವರ ಕಿರೀಟಕ್ಕೆ ಈಗ ಏಷ್ಯನ್ ಪ್ಯಾರಾ ಗೇಮ್ಸ್ನ ಚಿನ್ನದ ಪದಕದ ಗರಿ ಮುಡಿಗೇರಿದೆ.ಇವರ ಸಾಧನೆಯನ್ನು ಗುರುತಿಸಿ 2015ರಲ್ಲಿ ಯುವಜನ ಮತ್ತು ಕ್ರೀಡಾ ಸಚಿವಾಲಯವು ‘ರಾಷ್ಟ್ರೀಯ ಯುವ ಪ್ರಶಸ್ತಿ’ ನೀಡಿ ಗೌರವಿಸಿದೆ.
F54 ವರ್ಗ ಎಂದರೇನು?
ಸೊಂಟ ಹಾಗೂ ಶ್ರೋಣಿಯ ಕೆಳಭಾಗದ ಅಂಗಗಳ ಕಾರ್ಯನಿರ್ವಹಣೆಯಲ್ಲಿ ದುರ್ಬಲತೆ ಅಥವಾ ನ್ಯೂನ್ಯತೆ ಹೊಂದಿರುವ ಕ್ರೀಡಾಪಟುಗಳಿಗೆ ಈ F54 ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶವಿರುತ್ತದೆ. ಈ ವಿಭಾಗದ ಕ್ರೀಡಾಪಟುಗಳು ನಿಗದಿತ ವಿಶೇಷ ಎಸೆತದ ಕುರ್ಚಿಯಲ್ಲಿ (Throwing Chair) ಕುಳಿತು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ.
#SuvarnaRaj #AsianParaGames2026 #DiscusThrowGold #ParaAthletics #TeamIndia #Nagoya2026 #UdayakalaNews #WomenEmpowerment #IndianSports #ProudMoment


