ಉದಯಕಾಲ ನ್ಯೂಸ್, ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಅತ್ಯಂತ ಪ್ರಮುಖ ಹಾಗೂ ರೋಮಾಂಚಕ ಘಟ್ಟವಾದ ವಿಶ್ವಪ್ರಸಿದ್ಧ ‘ಜಂಬೂಸವಾರಿ’ ಮೆರವಣಿಗೆಗೆ ಅದ್ಧೂರಿ ಚಾಲನೆ ದೊರೆತಿದೆ. ಐತಿಹಾಸಿಕ ಮೈಸೂರು ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಅವರು ವಿಧ್ಯುಕ್ತವಾಗಿ ಮೈಸೂರು ಪೇಟ ಧರಿಸಿ, ಪವಿತ್ರ ನಂದಿಧ್ವಜಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.
ನಂದಿಧ್ವಜಕ್ಕೆ ಹಾರ ಸಮರ್ಪಣೆ, ಸರಳತೆ ಮೆರೆದ ಸಿಎಂ
ದಸರಾ ಮೆರವಣಿಗೆಯ ಉದ್ಘಾಟನಾ ಸಮಾರಂಭದಲ್ಲಿ ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿ ಕಂಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಗಮನ ಸೆಳೆದರು. ಈ ವೇಳೆ ಅವರಿಗೆ ಸನ್ಮಾನಕ್ಕಾಗಿ ತಂದಿದ್ದ ಬೃಹತ್ ಹೂವಿನ ಹಾರವನ್ನು ಧರಿಸಲು ಅವರು ವಿನಯಪೂರ್ವಕವಾಗಿ ನಿರಾಕರಿಸಿದರು. ಬದಲಾಗಿ, ತಮಗಾಗಿ ತಂದಿದ್ದ ಆ ಹಾರವನ್ನು ಭಕ್ತಿಯಿಂದ ನಂದಿಧ್ವಜಕ್ಕೆ ಹಾಕಿಸುವಂತೆ ಸೂಚಿಸುವ ಮೂಲಕ ಸರಳತೆ ಮೆರಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ತಾಯಿ ಚಾಮುಂಡೇಶ್ವರಿಯ ಸುಂದರ ವಿಗ್ರಹವನ್ನು ಸಿಎಂ ಅವರಿಗೆ ಸ್ಮರಣಿಕೆಯಾಗಿ ನೀಡಲಾಯಿತು.
ತಾಯಿ ಚಾಮುಂಡಿ ದರ್ಶನ ಪಡೆದು ನಾಡಿನ ಜನತೆಗೆ ಪ್ರಾರ್ಥನೆ
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತಮ್ಮ ಭಾವನೆಗಳನ್ನು ಹಂಚಿಕೊಂಡರು. “ಇದು ನನ್ನ ಬದುಕಿನ ಅತ್ಯಂತ ಅಮೂಲ್ಯ ಹಾಗೂ ಮರೆಯಲಾಗದ ಕ್ಷಣ. ತಾಯಿ ಚಾಮುಂಡೇಶ್ವರಿಯ ಅಶೀರ್ವಾದದಿಂದ ನನಗೆ ಈ ಐತಿಹಾಸಿಕ ಅವಕಾಶ ಲಭಿಸಿದೆ. ತಾಯಿಯ ಕೃಪೆಯೇ ನಮಗೆ ದೊಡ್ಡ ಶಕ್ತಿ” ಎಂದು ಭಾವನಾತ್ಮಕವಾಗಿ ನುಡಿದರು.
ರಾಜ್ಯದಲ್ಲಿ ಮಳೆ-ಬೆಳೆ ಸಮೃದ್ಧವಾಗಿರಲಿ, ರೈತರ ಬಾಳು ಬೆಳಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ ಅವರು, “ಈ ದಸರಾ ಹಬ್ಬದ ಸಂಭ್ರಮದಿಂದ ಎಲ್ಲರ ಜೀವನದಲ್ಲಿ ದ್ವೇಷ-ಅಸೂಯೆಗಳು ದೂರವಾಗಿ ಸಾಮರಸ್ಯ ನಿರ್ಮಾಣವಾಗಬೇಕು. ಅನ್ಯಾಯಗಳು ಅಳಿದುಹೋಗಿ, ಯುವಕರ ಭವಿಷ್ಯ ಉಜ್ವಲಗೊಳ್ಳಲು ತಾಯಿ ಚಾಮುಂಡಿ ಎಲ್ಲರಿಗೂ ಒಳ್ಳೆಯಬುದ್ಧಿ ಹಾಗೂ ಶಕ್ತಿ ನೀಡಲಿ” ಎಂದು ಹಾರೈಸಿದರು.
ಈ ಭವ್ಯ ಸಮಾರಂಭದಲ್ಲಿ ವಿವಿಧ ಗಣ್ಯರು, ಸಚಿವರು, ಶಾಸಕರು ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ನಾಡಿನ ಹಾಗೂ ಹೊರರಾಜ್ಯಗಳ ಪ್ರವಾಸಿಗರು ಸಾಕ್ಷಿಯಾಗಿ, ಜಂಬೂಸವಾರಿಯ ಗಜಪಡೆಯ ವೈಭವವನ್ನು ಕಣ್ತುಂಬಿಕೊಂಡರು.
#MysuruDasara2026 #JambooSavari #CMDKShivakumar #NandivadaPuja #UdayakalaNews #MysuruPalace #KarnatakaCulture #DasaraFestival


