Saturday, October 17, 2026
Menu

ದಸರಾದಲ್ಲಿ ತುಳುನಾಡಿನ ವೈಭವ: ತುಳುವರ ಜನಪದ ಸಂಸ್ಕೃತಿಯ ಅನಾವರಣ!

ಉದಯಕಾಲ ನ್ಯೂಸ್, ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿರುವ ಬೆನ್ನಲ್ಲೇ, ನಾಡಿನ ಕರಾವಳಿಯ ಹಿರಿಮೆಯಾದ ತುಳುನಾಡಿನ ಮಣ್ಣಿನ ಸೊಗಡು, ಭಾಷೆಯ ಕಂಪು ಹಾಗೂ ಗ್ರಾಮೀಣ ಬದುಕಿನ ಶ್ರೀಮಂತ ಪರಂಪರೆ ಮೈಸೂರಿನ ನೆಲದಲ್ಲಿ ಅನಾವರಣಗೊಳ್ಳಲು ಸಜ್ಜಾಗಿದೆ. ವಿಶ್ವಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಜೋಡುಕೆರೆ ಕಂಬಳದ ಕ್ರೀಡಾ ಸಂಭ್ರಮದ ಸಮೀಪದಲ್ಲೇ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ವಿಶಿಷ್ಟ ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ.

ಪುತ್ತೂರಿನ ಪಜಿರ್‌ತುಳು ಅಧ್ಯಯನ ಕೇಂದ್ರದ ಆಶ್ರಯದಲ್ಲಿ ರೂಪುಗೊಂಡಿರುವ ಈ ಸಾಂಸ್ಕೃತಿಕ ಉತ್ಸವವು ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ. ಬದಲಾಗಿ, ಕರಾವಳಿ ತುಳುನಾಡಿನ ನೆನಪುಗಳನ್ನು ಮೈಸೂರಿನ ಜನತೆಗೆ ಪರಿಚಯಿಸುವ ಹಾಗೂ ಎರಡು ಭಿನ್ನ ನೆಲದ ಸಂಸ್ಕೃತಿಗಳ ನಡುವಿನ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶಿಷ್ಟ ಪ್ರಯತ್ನವಾಗಿದೆ. ಕಂಬಳದ ಸಮೀಪದ ವಿಶೇಷ ಸಾಂಸ್ಕೃತಿಕ ವೇದಿಕೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಮೂಡಿಬರಲಿದೆ.

ನಾಲ್ಕು ವಿಶಿಷ್ಟ ಆಯಾಮಗಳ ಸಾಂಸ್ಕೃತಿಕ ಹಬ್ಬ

ಈ ಸಮಾರಂಭವು ಒಟ್ಟು ನಾಲ್ಕು ಪ್ರಮುಖ ಆಯಾಮಗಳನ್ನು ಒಳಗೊಂಡಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರನ್ನು ಕೈಬೀಸಿ ಕರೆಯುತ್ತಿದೆ

1. ಪರಪ್ಪು (ಜೀವಂತ ಇತಿಹಾಸ) ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ನೆನಪುಗಳಿಗೆ ಮರು ಜೀವ ತುಂಬುವ ನಿಟ್ಟಿನಲ್ಲಿ ‘ಪರಪ್ಪು’ ಪ್ರದರ್ಶನ ಆಯೋಜಿಸಲಾಗಿದೆ. ಹಿಂದಿನ ತಲೆಮಾರುಗಳು ದೈನಂದಿನ ಬದುಕಿನಲ್ಲಿ ಬಳಸುತ್ತಿದ್ದ ಪ್ರಾಚೀನ ವಸ್ತುಗಳು, ಕೃಷಿ ಉಪಕರಣಗಳು, ಸಾಂಪ್ರದಾಯಿಕ ಗೃಹೋಪಯೋಗಿ ಸಾಮಗ್ರಿಗಳು ಇಲ್ಲಿ ಕಣ್ಮನ ಸೆಳೆಯಲಿವೆ. ಇದರೊಂದಿಗೆ ಮೈಸೂರಿನ ಪ್ರಾಚೀನ ವಸ್ತುಗಳೂ ಸಹ ಪ್ರದರ್ಶನದ ಭಾಗವಾಗುತ್ತಿರುವುದು ವಿಶೇಷ.

2. ಪಣವು (ನಾಣ್ಯಗಳ ಪ್ರದರ್ಶನ) ನಾಣ್ಯವೆಂಬುದು ಕೇವಲ ವಿನಿಮಯ ಸಾಧನವಲ್ಲ, ಅದೊಂದು ಕಾಲದ ಇತಿಹಾಸ. ಭಾರತದ ವಿವಿಧ ಭಾಗಗಳು ಹಾಗೂ ವಿದೇಶಗಳ ಹಳೆಯ ನಾಣ್ಯಗಳ ಅಪರೂಪದ ಸಂಗ್ರಹವಾದ ‘ಪಣವು’ ಮೂಲಕ ಹಿಂದಿನ ಕಾಲದ ಆರ್ಥಿಕ ವ್ಯವಸ್ಥೆ, ವ್ಯಾಪಾರ ಸಂಪರ್ಕ ಹಾಗೂ ನಾಗರಿಕತೆಯ ಬೆಳವಣಿಗೆಯನ್ನು ಅರಿಯಲು ವಿದ್ಯಾರ್ಥಿಗಳು ಮತ್ತು ಇತಿಹಾಸಾಸಕ್ತರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.

3. ತುಳುನಾಡು ಮಾಣಿಕ್ಯ (ಸಾಧಕರಿಗೆ ಸನ್ಮಾನ) ಹುಟ್ಟಿದ ನೆಲ ತುಳುನಾಡಾಗಿದ್ದು, ಸಾಧನೆಯ ನೆಲೆಯಾಗಿ ಮೈಸರನ್ನು ಆಯ್ಕೆ ಮಾಡಿಕೊಂಡು ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಉದ್ಯಮ ಹಾಗೂ ಸಮಾಜಸೇವೆ) ಗಮನಾರ್ಹ ಸಾಧನೆ ಮಾಡಿರುವ 25 ಮಂದಿ ಪ್ರತಿಭಾವಂತರನ್ನು ಗುರುತಿಸಿ ‘ತುಳುನಾಡು ಮಾಣಿಕ್ಯ’ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.

4. ಸಂಗೀತ ಸಂಭ್ರಮ ಕನ್ನಡ ಹಾಗೂ ತುಳು ಭಾಷೆಗಳ ಮಧುರ ಧ್ವನಿಯ ಹದವಾದ ಸಂಯೋಜನೆಯೊಂದಿಗೆ ಮೂಡಿಬರುವ ಸಂಗೀತ ಸಂಭ್ರಮವು ಕಾವೇರಿ ನಾಡಿನಲ್ಲಿ ಕರಾವಳಿಯ ರಾಗವನ್ನು ಮೊಳಗಿಸಲಿದೆ.

ನಾಳೆ ಅದ್ಧೂರಿ ಉದ್ಘಾಟನೆ

ಅಕ್ಟೋಬರ್ 18ರಂದು ಬೆಳಗ್ಗೆ ನಡೆಯಲಿರುವ ಈ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಶಾಸಕ ಜಿ.ಟಿ. ದೇವೇಗೌಡ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ರೈ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿತಿಗಳಾಗಿ ಭಾಗವಹಿಸಲಿದ್ದಾರೆ.
#MysuruDasara #KambalaMysuru #TuluCulture #TuluNadu #UdayakalaNews #ParappuPanavu #TuluvasInMysuru #MysuruEvents #KarnatakaCulture #TraditionalArt

Related Posts

Leave a Reply

Your email address will not be published. Required fields are marked *