Saturday, October 17, 2026
Menu

ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ರಿಯಾಯಿತಿ ದರದಲ್ಲಿ ಜಮೀನು ಹಂಚಿಕೆ: ಅಕ್ಟೋಬರ್ 30ಕ್ಕೆ ಮರು ವಿಚಾರಣೆ!

ಉದಯಕಾಲ ನ್ಯೂಸ್, ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ (Siddhartha Vihar Trust) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ (BDA) ಹಾಗೂ ಕೆಐಎಡಿಬಿ (KIADB) ಮೂಲಕ ರಿಯಾಯಿತಿ ದರದಲ್ಲಿ ಜಮೀನು ಹಂಚಿಕೆ ಮಾಡಲಾಗಿದೆ ಎನ್ನಲಾದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಹಿಂದೆ ಆಗಸ್ಟ್ 18ರಂದು ನೀಡಿದ್ದ ತನ್ನ ತೀರ್ಪನ್ನು ಹೈಕೋರ್ಟ್ ಹಿಂಪಡೆದಿದ್ದು, ಪ್ರಕರಣವನ್ನು ಮರುವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ಅರ್ಜಿದಾರರ ಪರ ವಾದ ಹಾಗೂ ದಾಖಲೆಗಳನ್ನು ಪರಿಗಣಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದ್ದು, ಪ್ರಕರಣದ ಅಂತಿಮ ವಾದವನ್ನು ಆಲಿಸಲು ಬರುವ ಅಕ್ಟೋಬರ್ 30ಕ್ಕೆ ಮರುವಿಚಾರಣೆ ದಿನಾಂಕವನ್ನು ನಿಗದಿಪಡಿಸಿದೆ.

ಪ್ರಕರಣದ ಹಿನ್ನೆಲೆ

ದೂರುದಾರರಾದ ವಿಜಯರಾಘವ ಮರಾಠೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ಟ್ರಸ್ಟಿಯಾಗಿರುವ ರಾಹುಲ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಸಿದ್ಧಾರ್ಥ ವಿಹಾರ ಟ್ರಸ್ಟ್ ಅನ್ನು ಪರಿಶಿಷ್ಟ ಜಾತಿ (SC) ಸಮುದಾಯದ ಟ್ರಸ್ಟ್ ಎಂದು ಬಿಂಬಿಸಿ, ಬಿಡಿಎಯಿಂದ ಶೇ.50ರಷ್ಟು ಬೃಹತ್ ರಿಯಾಯಿತಿಯಲ್ಲಿ ಜಮೀನು ಪಡೆಯಲಾಗಿದೆ ಎಂದು ದೂರುದಾರರು ಗಂಭೀರ ಆರೋಪ ಮಾಡಿದ್ದರು.

ಬಿಡಿಎ ನಿವೇಶನ ವಿವಾದ
ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಸುಮಾರು 8,125 ಚದರ ಮೀಟರ್ ವಿಸ್ತೀರ್ಣದ ನಾಗರಿಕ ಸೌಲಭ್ಯ (Civic Amenity) ನಿವೇಶನವನ್ನು ಈ ಟ್ರಸ್ಟ್‌ಗೆ ಮಂಜೂರು ಮಾಡಲಾಗಿತ್ತು. ಆದರೆ ಈ ಟ್ರಸ್ಟ್ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗಗಳ ಜನರ ಹಿತಕ್ಕಾಗಿ ಸ್ಥಾಪನೆಯಾಗಿದೆಯೇ ಹೊರತು, ಕೇವಲ ಪರಿಶಿಷ್ಟ ಜಾತಿಗಾಗಿ ಮಾತ್ರ ಮೀಸಲಾದ ಸಂಸ್ಥೆಯಲ್ಲ. ಹೀಗಿದ್ದರೂ ಎಸ್‌ಸಿ ವರ್ಗದಡಿ ಶೇ.50ರ ರಿಯಾಯಿತಿ ಪಡೆಯಲು ಟ್ರಸ್ಟ್ ಅರ್ಹವಾಗಿರಲಿಲ್ಲ ಎಂದು ದೂರುದಾರರು ವಾದ ಮಂಡಿಸಿದ್ದಾರೆ.

ಕೆಐಎಡಿಬಿ ಜಮೀನು ವಿವಾದ
ಇನ್ನು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಕೆಐಎಡಿಬಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಿರುವುದನ್ನೂ ದೂರುದಾರರು ಪ್ರಶ್ನಿಸಿದ್ದಾರೆ. ಏರೋಸ್ಪೇಸ್ ಅಥವಾ ಸಂಶೋಧನಾ ಕ್ಷೇತ್ರದಲ್ಲಿ ಯಾವುದೇ ಪೂರ್ವಾನುಭವ ಇಲ್ಲದಿದ್ದರೂ ಟ್ರಸ್ಟ್‌ಗೆ ಜಮೀನು ನೀಡಲಾಗಿದೆ ಎಂಬುದು ದೂರುದಾರರ ಮುಖ್ಯ ಆರೋಪವಾಗಿದೆ.

ನ್ಯಾಯಾಲಯದ ನಿರ್ಧಾರ!

ದೂರುದಾರ ವಿಜಯರಾಘವ ಮರಾಠೆ ಸಲ್ಲಿಸಿದ್ದ ಖಾಸಗಿ ದೂರಿನೊಂದಿಗೆ ಜೋಡಿಸಲಾಗಿದ್ದ ಪ್ರಮಾಣಪತ್ರದಲ್ಲಿ ಕಾನೂನುಬದ್ಧ ದೋಷವಿರುವುದನ್ನು ಈ ಹಿಂದೆ ಹೈಕೋರ್ಟ್ ಗಮನಿಸಿತ್ತು. ಆ ದೋಷ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡಿದ್ದ ನ್ಯಾಯಾಲಯ, ದೂರಿನಲ್ಲಿರುವ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರ ತನಿಖೆ ಅಗತ್ಯವಿದೆಯೇ ಎಂಬುದನ್ನು ಕೆಳ ನ್ಯಾಯಾಲಯವೇ ನಿರ್ಧರಿಸಬೇಕು ಎಂದು ಸೂಚಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬೆಂಗಳೂರಿನ 82ನೇ ಸಿಸಿಹೆಚ್ ನ್ಯಾಯಾಲಯದ ಕ್ರಮವನ್ನು ರದ್ದುಪಡಿಸಿದ್ದ ಹೈಕೋರ್ಟ್, ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಟ್ರಸ್ಟಿಯಾಗಿರುವ ರಾಹುಲ್ ಖರ್ಗೆ ಅವರು ಮರುಪರಿಶೀಲನೆ ಅಥವಾ ಆದೇಶ ಹಿಂಪಡೆಯುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಆಗಸ್ಟ್ 18ರ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದ್ದು, ಅ.30ರಂದು ಹೊಸದಾಗಿ ವಾದ-ಪ್ರತಿವಾದಗಳನ್ನು ಆಲಿಸಲು ನಿರ್ಧರಿಸಿದೆ.

#SiddharthaViharTrust #MallikarjunKharge #RahulKharge #KarnatakaHighCourt #UdayakalaNews #BDA #KIADB #LegalNewsKannada #BangaloreNews #PoliticalControversy

Related Posts

Leave a Reply

Your email address will not be published. Required fields are marked *