ಉದಯಕಾಲ ನ್ಯೂಸ್, ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು (ಶುಕ್ರವಾರ) ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಾ ಮೆರವಣಿಗೆಯು ತೀವ್ರ ಕುತೂಹಲ ಹಾಗೂ ರಾಜಕೀಯ ತಿರುವು ಪಡೆದುಕೊಂಡಿದೆ. ಕನ್ನಾಟ್ ಪ್ಲೇಸ್ನಲ್ಲಿ ‘ತಿರಂಗಾ ಯಾತ್ರೆ’ ನಡೆಸಲು ಸಜ್ಜಾಗಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ದೆಹಲಿ ಪೊಲೀಸರು ಶಾಕ್ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸ್ಪಷ್ಟ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಸಿಜೆಪಿಯ ಪ್ರತಿಯೊಂದು ಪ್ರತಿಭಟನೆ, ಕಾರ್ಯಕ್ರಮ ಹಾಗೂ ಚಲನೆಗೆ ತಡೆಯೊಡ್ಡುತ್ತಿರುವುದನ್ನು ನೋಡಿದರೆ ಬಿಜೆಪಿ ಪಾಳಯದಲ್ಲಿ ನಡುಕ ಉಂಟಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅನೀಶ್ ಗವಾಂಡೆ ನಿವಾಸಕ್ಕೆ ಬಂದ ಪೊಲೀಸ್ ದಂಡು
ತಿರಂಗಾ ಮೆರವಣಿಗೆ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಂತೆ, ಎನ್ಸಿಪಿ-ಎಸ್ಸಿಪಿ (NCP-SCP) ವಕ್ತಾರ ಅನೀಶ್ ಗವಾಂಡೆ (Anish Gawande) ಅವರ ದೆಹಲಿ ನಿವಾಸದಲ್ಲಿ ತಂಗಿದ್ದ ಅಭಿಜೀತ್ ದೀಪ್ಕೆ ಅವರನ್ನು ಭೇಟಿಯಾಗಲು ಏಕಾಏಕಿ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿದರು. ಈ ವೇಳೆ ಬಿಎನ್ಎಸ್ಎಸ್ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂಬ ನೆಪವೊಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂದು ನೋಟಿಸ್ ನೀಡಲಾಯಿತು. ನವದೆಹಲಿ ಪುರಸಭೆ ಮಂಡಳಿಯು (NDMC) ಈ ಮೆರವಣಿಗೆಗೆ ಯಾವುದೇ ಅನುಮತಿ ನೀಡಿಲ್ಲವಾದ್ದರಿಂದ, ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಮೋದಿ ಸರ್ಕಾರದ ಹೇಡಿತನ – ಅನೀಶ್ ಗವಾಂಡೆ ಕಿಡಿ
ಪೊಲೀಸರ ಈ ಕ್ರಮದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಎನ್ಸಿಪಿ-ಎಸ್ಸಿಪಿ ವಕ್ತಾರ ಅನೀಶ್ ಗವಾಂಡೆ, “ನಾನು ಊಟಕ್ಕೆ ಹೊರಗೆ ಹೋಗಿದ್ದಾಗ ಪೊಲೀಸರು ಬಂದಿದ್ದಾರೆ. ನಮ್ಮ ಅತಿಥಿಯಾಗಿರುವ ಅಭಿಜೀತ್ ದೀಪ್ಕೆ ಅವರೊಂದಿಗೆ ಚರ್ಚಿಸುತ್ತೇವೆ. ‘ಹರ್ ಘರ್ ತಿರಂಗ’ (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಎಂದು ದೊಡ್ಡ ಮಾತನಾಡುವ ಕೇಂದ್ರ ಬಿಜೆಪಿ ಸರ್ಕಾರ ಇಂದು ತ್ರಿವರ್ಣ ಧ್ವಜಕ್ಕೆ ಹೆದರುತ್ತಿದೆ. ಪೊಲೀಸರು ನಮಗೆ ಹೋಗಲು ಅನುಮತಿ ನಿರಾಕರಿಸಿದರೆ ಅದು ಮೋದಿ ಸರ್ಕಾರದ ಸಂಪೂರ್ಣ ಹೇಡಿತನವನ್ನು ತೋರಿಸುತ್ತದೆ. ನಾವು ‘ತಿರಂಗ ಯಾತ್ರೆ’ಯಲ್ಲಿ ಖಂಡಿತವಾಗಿಯೂ ಭಾಗವಹಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಬಿಗಿ ಭದ್ರತೆ ಹಾಗೂ ನಿಷೇಧಾಜ್ಞೆಯ ನಡುವೆಯೂ ಸಿಜೆಪಿ ಕಾರ್ಯಕರ್ತರು ಮತ್ತು ವಿಪಕ್ಷ ನಾಯಕರು ತಿರಂಗಾ ಮಾರ್ಚ್ ನಡೆಸಲು ಪಟ್ಟುಹಿಡಿದಿರುವುದು ದೆಹಲಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.
#AbhijeetDeepke #CJP16October #TirangaMarchDelhi #UdayakalaNews #AnishGawande #DelhiPoliceNotice #BNSS163 #DelhiNews #PoliticsKannada #BreakingNewsIndia


