ಉದಯಕಾಲ ನ್ಯೂಸ್, ಹಾಸನ: ದೇಶಾದ್ಯಂತ ಚುನಾವಣಾ ಆಯೋಗದಿಂದ (Election Commission) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವಂತೆಯೇ, ಹಾಸನ ಜಿಲ್ಲೆಯ ಸಕಲೇಶಪುರ (Sakaleshpur) ಪಟ್ಟಣದಲ್ಲಿ ದಢಿಕರಿಸಿ ಆತಂಕ ಸೃಷ್ಟಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಪಟ್ಟಣದ ಶ್ರೀಗಂಧ ಹೋಟೆಲ್ ಬಳಿ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ ಹಾಗೂ ಹಲವಾರು ಗುರುತಿನ ದಾಖಲೆಗಳನ್ನು ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಗಂಭೀರ ಪ್ರಕರಣದ ಕುರಿತು ಸ್ಥಳೀಯ ಆಡಳಿತವು ತೀವ್ರ ತನಿಖೆಗೆ ಆದೇಶಿಸಿದೆ.
ಉಪವಿಭಾಧಿಕಾರಿಗಳ ಭೇಟಿ ಹಾಗೂ ಪರಿಶೀಲನೆ
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಸಕಲೇಶಪುರ ಉಪವಿಭಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಇಂದು ನೇರವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉಪವಿಭಾಧಿಕಾರಿಗಳು, “ಸ್ಥಳದಲ್ಲಿ ಯಾದಗಿರಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಹಾಗೂ ಹೊರರಾಜ್ಯದ ಸುಮಾರು 26ಕ್ಕೂ ಅಧಿಕ ಮತದಾರರ ಗುರುತಿನ ಚೀಟಿಗಳು, 30ರಿಂದ 40ಕ್ಕೂ ಹೆಚ್ಚು ಗುರುತಿನ ಪತ್ರಗಳು ಪತ್ತೆಯಾಗಿವೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಈ ಯಾವ ದಾಖಲೆಗಳೂ ಸಕಲೇಶಪುರ ತಾಲೂಕಿಗೆ ಸೇರಿದವುಗಳಲ್ಲ. ಮೇಲ್ನೋಟಕ್ಕೆ ಇವು ಈ ಭಾಗದಲ್ಲಿ ಕೂಲಿ ಕಾರ್ಮಿಕರಾಗಿ ಅಥವಾ ಕೆಲಸಕ್ಕೆ ಬಂದಿರುವ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ದಾಖಲೆಗಳಾಗಿರಬಹುದು” ಎಂದು ಶಂಕಿಸಿದ್ದಾರೆ.
ಎಫ್ಐಆರ್ ದಾಖಲಿಸಲು ಸೂಚನೆ
ವಶಪಡಿಸಿಕೊಳ್ಳಲಾದ ಎಲ್ಲಾ ದಾಖಲೆಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಸದ್ಯ ಎಸ್ಐಆರ್ (SIR) ಪ್ರಕ್ರಿಯೆಗೂ ಈ ಘಟನೆಗೂ ನೇರ ಸಂಬಂಧವಿರುವಂತೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲೆಕ್ಷನ್ ಶಿರಸ್ತೆದಾರ್ ಮೂಲಕ ಅಧಿಕೃತವಾಗಿ ಎಫ್ಐಆರ್ (FIR) ದಾಖಲು ಮಾಡಲಾಗುತ್ತಿದೆ. ಪೊಲೀಸರು ಇದರ ಹಿಂದೆ ಇರಬಹುದಾದವರ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ.
#Sakaleshpur #HassanNews #VoterIDScam #KarnatakaNews #ElectionCommission #SIRUpdate #Udayakala #CrimeNews #LatestNews


