Thursday, October 15, 2026
Menu

ಲಡಾಖ್‌ಗೆ ರೂ. 3,350 ಕೋಟಿ ಕಾಮಗಾರಿಗಳ ಭರ್ಜರಿ ಕೊಡುಗೆ: ಐದು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಉದಯಕಾಲ ನ್ಯೂಸ್, ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸರ್ವೋಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಲಡಾಖ್‌ಗೆ ಒಟ್ಟು ರೂ. 3,350 ಕೋಟಿ ಮೌಲ್ಯದ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮಾಧ್ಯಮದ ಮೂಲಕ ಲೋಕಾರ್ಪಣೆಗೊಳಿಸಿದರು. ವಾಯು ಸಂಪರ್ಕ, ಅತ್ಯಾಧುನಿಕ ರಸ್ತೆಗಳು, ನವೀಕರಿಸಬಹುದಾದ ಇಂಧನ, ಜಲ ಭದ್ರತೆ ಹಾಗೂ ಐತಿಹಾಸಿಕ ಪರಂಪರೆ ಸಂರಕ್ಷಣೆಗೆ ಒತ್ತು ನೀಡುವ ಈ ಯೋಜನೆಗಳು ಲಡಾಖ್‌ನ ಚಿತ್ರಣವನ್ನೇ ಬದಲಾಯಿಸಲಿವೆ.

ಉದ್ಘಾಟನೆಗೊಂಡ ಪ್ರಮುಖ 5 ಯೋಜನೆಗಳು

1.ಲೇಹ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್
ರೂ. 640 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದ ನೂತನ ಪ್ರಯಾಣಿಕರ ಟರ್ಮಿನಲ್ ಗಮನ ಸೆಳೆದಿದೆ. ಅಂದಾಜು 23,800 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಅತ್ಯಾಧುನಿಕ ಕಟ್ಟಡವು ವಾರ್ಷಿಕವಾಗಿ ಬರೋಬ್ಬರಿ 35 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಪರಿಸರಸ್ನೇಹಿ ತಂತ್ರಜ್ಞಾನವಾದ ಜಿಯೋಥರ್ಮಲ್ (ಭೂಶಾಖದ)ಕ್ತಿಯನ್ನು ಇಲ್ಲಿ ಇಂಧನ ದಕ್ಷತೆಗಾಗಿ ಬಳಸಿಕೊಳ್ಳಲಾಗಿದೆ.

2. 298 ಕಿ.ಮೀ. ನಿಮ್ಮು-ಪದುಮ್-ದರಚಾ ರಸ್ತೆ
ಗಡಿ ರಸ್ತೆಗಳ ಸಂಸ್ಥೆ (BRO) ನಿರ್ಮಿಸಿರುವ 298 ಕಿ.ಮೀ. ಉದ್ದದ ಈ ಆರ್ಥಿಕ ಹಾಗೂ ಕಾರ್ಯತಂತ್ರದ ರಸ್ತೆಯು ಲೇಹ್‌ನ ನಿಮ್ಮುವನ್ನು ಹಿಮಾಚಲ ಪ್ರದೇಶದ ದರಚಾ ಜೊತೆ ಸಂಪರ್ಕಿಸುತ್ತದೆ. ಕಠಿಣ ಹಿಮಾಲಯನ್ ಪ್ರದೇಶ ಹಾಗೂ ಶಿಂಕುನ್ ಲಾ ಕಣಿವೆಯ ಮೂಲಕ ಸಾಗುವ ಈ ರಸ್ತೆಯು ಸೇನಾ ಪಡೆಗಳ ಚಲನವಲನಕ್ಕೆ ಮತ್ತು ಸೈನಿಕರಿಗೆ ಲಾಜಿಸ್ಟಿಕ್ ಬೆಂಬಲ ನೀಡಲು ಅತ್ಯಂತ ನಿರ್ಣಾಯಕವಾಗಿದೆ. ಜತೆಗೆ ಸ್ಥಳೀಯ ಜಾಸ್ಕರ್ ಕಣಿವೆಯ ಜನರಿಗೆ ಸಂಪರ್ಕ ಕಲ್ಪಿಸುವಲ್ಲಿ ಇದು ಸದಾ ಜೀವಪರ ಮಾರ್ಗವಾಗಲಿದೆ.

3. ಜಲವಿದ್ಯುತ್ ಮತ್ತು ವಿದ್ಯುತ್ ಪ್ರಸರಣ ವ್ಯವಸ್ಥೆ
ಪ್ರದೇಶದಲ್ಲಿ ವಿದ್ಯುತ್ ಲಭ್ಯತೆ ಹಾಗೂ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು 9 ಮೆಗಾವ್ಯಾಟ್ ಸಾಮರ್ಥ್ಯದ ‘ಹಾನು ಸಣ್ಣ ಜಲವಿದ್ಯುತ್ ಯೋಜನೆ’ (Hanu Small Hydroelectric Project) ಹಾಗೂ 66 ಕೆವಿ ಡಬಲ್ ಸರ್ಕ್ಯೂಟ್ ದಾಹ್-ಹಾನು-ಖಲ್ತ್ಸಿ ಪ್ರಸರಣ ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಗಿದೆ.

4. ದೇಶದ ಮೊದಲ ‘ಪೆಟ್ರೋಗ್ಲಿಫ್ಸ್ ಸಂರಕ್ಷಣೆ ಪಾರ್ಕ್’
ಲೇಹ್‌ನ ಸಿಂಧು ನದಿ ತೀರದಲ್ಲಿ ಭಾರತದ ಮೊಟ್ಟಮೊದಲ ಪೆಟ್ರೋಗ್ಲಿಫ್ ಸಂರಕ್ಷಣೆ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಮತ್ತು ಪ್ರಾಚೀನ ಮಾನವ ಜೇವನದ ಕುರುಹಾಗಿ ಬಂಡೆಗಳ ಮೇಲೆ ಕೆತ್ತಲಾಗಿರುವ ವಿಶಿಷ್ಟ ಶಿಲಾಸಂಸ್ಕೃತಿಯ ಆಕೃತಿಗಳನ್ನು (Petroglyphs) ಸಂರಕ್ಷಿಸಲು ಈ ಪಾರ್ಕ್ ನೆರವಾಗಲಿದೆ.

5.ಪ್ರೋಜೆಕ್ಟ್ ಹಿಮ್ ಸರೋವರ (ಜಲ ಭದ್ರತೆ)
ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 40 ಹಳ್ಳಿಗಳಲ್ಲಿ ‘ಪ್ರೋಜೆಕ್ಟ್ ಹಿಮ್ ಸರೋವರ’ ಅಡಿಯಲ್ಲಿ ಒಟ್ಟು 40 ಜಲಶೇಖರಣಾ ಸರೋವರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕೃಷಿ ಚಟುವಟಿಕೆಗಳಿಗೆ ಹಾಗೂ ಬೇಸಿಗೆಯ ಕಾಲದಲ್ಲಿ ನೀರಾವರಿಗೆ ರೈತರಿಗೆ ಆಸರೆಯಾಗಲಿದೆ.

ಒಟ್ಟಾರೆಯಾಗಿ ದುರ್ಗಮ ಕಣಿವೆ ಪ್ರದೇಶವಾದರೂ ಲಡಾಖ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಲ್ಲಿನ ಜನರ ಜೀವನಮಟ್ಟವನ್ನು ಉನ್ನತೀಕರಿಸಲು ಈ ಅಭಿವೃದ್ಧಿ ಮಂಥನ ಮುಂದುವರಿದಿದೆ.
#Ladakh #PMModi #Udayakala #LehAirport #NimmuPadumDarchaRoad #HimSarovar #IndianArmy #Infrastructure #DevelopmentNews #LadakhNews

Related Posts

Leave a Reply

Your email address will not be published. Required fields are marked *