ಉದಯಕಾಲ ನ್ಯೂಸ್, ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್ (Kerala Congress) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿವಾದಾತ್ಮಕ ಪೋಸ್ಟ್ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಹಾಗೂ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸಿಜೆಐ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಈ ಪೋಸ್ಟ್ ಪ್ರಕಟಿಸಲಾಗಿದ್ದು, ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಡಿಲಿಟ್ ಮಾಡಲಾಗಿದೆ.
ವಿವಾದಕ್ಕೆ ಕಾರಣವೇನು?
ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು ಮತ್ತು ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಸ್ಪಷ್ಟಪಡಿಸಿದ್ದರು. ಅಲ್ಲದೆ, ವಿಪಕ್ಷ ನಾಯಕರ ಭೇಟಿಯ ಮನವಿಯನ್ನು ತಳ್ಳಿಹಾಕಿದ್ದ ಅವರು, ಈ ವಿಚಾರಗಳು ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಇಂತಹ ಭೇಟಿಗಳು ಸಂವಿಧಾನದ ‘ಅಧಿಕಾರ ಪ್ರತ್ಯೇಕತೆ’ ತತ್ವಕ್ಕೆ ವಿರುದ್ಧವಾಗುತ್ತವೆ ಎಂದು ತಿಳಿಸಿದ್ದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, *“ಡಿಯರ್ ಸೂರ್ಯ ಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ”* ಎಂದು ಉದ್ಧಟತನದ ಧಾಟಿಯಲ್ಲಿ ಪೋಸ್ಟ್ ಮಾಡಿತ್ತು.
ಬಿಜೆಪಿಯಿಂದ ತೀವ್ರ ಆಕ್ರೋಶ
ನ್ಯಾಯಾಂಗದ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ ನಡೆಸಿರುವ ಈ ನೇರ ವಾಗ್ದಾಳಿಗೆ ಬಿಜೆಪಿ ಹಾಗೂ ವಕೀಲರ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮತ್ತು ಬೆದರಿಕೆ ಹಾಕಲು ಕಾಂಗ್ರೆಸ್ ನಿರಂತರವಾಗಿ ಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, “ನಾನು ಮೊದಲೇ ಹೇಳಿದ್ದೆ, ಕಾಂಗ್ರೆಸ್ ಪಕ್ಷದ ಮುಂದಿನ ಗುರಿ ನ್ಯಾಯಾಂಗ ವ್ಯವಸ್ಥೆ. ಭಾರತದ ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಮಾಡಲು ಕಾಂಗ್ರೆಸ್ ಬಯಸಿದೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (SCAORA) ಸೇರಿದಂತೆ ವಿವಿಧ ಕಾನೂನು ಸಂಘಟನೆಗಳು ಸಿಜೆಐ ವಿರುದ್ಧದ ಈ ಹೇಳಿಕೆಯನ್ನು ಖಂಡಿಸಿದ್ದು, ಇದು ನ್ಯಾಯಾಂಗದ ಘನತೆಗೆ ಕುಂದುಂಟು ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿವೆ.
ಕಾಂಗ್ರೆಸ್ ಸ್ಪಷ್ಟನೆ ಮತ್ತು ಕ್ರಮ
ವಿವಾದ ಬಿಗಡಾಯಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಕೇರಳ ಕಾಂಗ್ರೆಸ್ ನಾಯಕತ್ವ, ಕೂಡಲೇ ಆಕ್ಷೇಪಾರ್ಹ ಪೋಸ್ಟ್ ಅನ್ನು ಡಿಲಿಟ್ ಮಾಡಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ (Sunny Joseph) ಸ್ಪಷ್ಟನೆ ನೀಡಿ, “ಪಕ್ಷದ ನಾಯಕರ ಯಾವುದೇ ಪೂರ್ವಾನುಮತಿ ಅಥವಾ ಗಮನಕ್ಕೆ ಬಾರದೆ ಈ ಪೋಸ್ಟ್ ಪ್ರಕಟಿಸಲಾಗಿದೆ. ಇದಕ್ಕೆ ಕಾರಣರಾದ ಸಿಬ್ಬಂದಿಯನ್ನು ತಕ್ಷಣವೇ ಕರ್ತವ್ಯದಿಂದ ವಜಾಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ವಿಶ್ವಾಸವಿದ್ದು, ಇಂತಹ ಪೋಸ್ಟ್ಗಳು ಪಕ್ಷದ ಅಧಿಕೃತ ನಿಲುವನ್ನು ಬಿಂಬಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
#KeralaCongress #CJISuryaKant #SupremeCourt #CongressControversy #KPCCOfficial #KiranRijiju #IndianPolitics #UdayakalaNews #LawAndOrder


