Menu

ಕಾಂಗ್ರೆಸ್‌ ಎಂಪಿ, ಜೆಎನ್‌ಯು ಪ್ರಾಧ್ಯಾಪಕ  ವಿರುದ್ಧ ಲೈಂಗಿಕ ಕಿರುಕುಳ ಆರೋಪ:  ಬಿಜೆಪಿ ಮಹಿಳಾ ಮೋರ್ಚಾ ಉಗ್ರ ಪ್ರತಿಭಟನೆ!

ಉದಯಕಾಲ ನ್ಯೂಸ್, ಬೆಂಗಳೂರು: ಜೆಎನ್‌ಯು ಪ್ರಾಧ್ಯಾಪಕ ಹಾಗೂ ಮಣಿಪುರದ ಕಾಂಗ್ರೆಸ್ ಸಂಸದರಾದ ಬಿಮೋಲ್ ಅಕೋಯಿಜಮ್ (Angomcha Bimol Akoijam) ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಸ್ವರೂಪದ ಲೈಂಗಿಕ ಕಿರುಕುಳ ಆರೋಪವನ್ನು ಖಂಡಿಸಿ, ಬೆಂಗಳೂರಿನಲ್ಲಿ ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆಯರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಿದ್ದಾರೆ.ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮುಂಭಾಗ ಜಮಾಯಿಸಿದ ನೂರಾರು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಆಕ್ರೋಶದ ಪೋಸ್ಟರ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. “ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷವೇ ಧಿಕ್ಕಾರ”, “ಲೈಂಗಿಕ ಕಿರುಕುಳ ಆರೋಪಿ ಸಂಸದ ತಕ್ಷಣವೇ ರಾಜೀನಾಮೆ ನೀಡಲಿ” ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿ ಮೌನವೇಕೆ? – ಬಿಜೆಪಿ ನಾಯಕಿಯರ ಪ್ರಶ್ನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶವ್ಯಾಪಿ ಯುವಜನರನ್ನು ಸೆಳೆಯುವ ಸಲುವಾಗಿ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸಿ, ಪಿತೃಪ್ರಭುತ್ವದ ವ್ಯವಸ್ಥೆಯನ್ನು ಒಡೆದು ಹಾಕಿ (Smash Patriarchy) ಎಂದು ಮಹಿಳಾ ಹಕ್ಕುಗಳ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ತಮ್ಮದೇ ಪಕ್ಷದ ಸಂಸದ ಹಾಗೂ ಪ್ರಾಧ್ಯಾಪಕನ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದರೂ ಈ ಕುರಿತು ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ಮೌನವಾಗಿರುವುದು ಯಾಕೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಕಚೇರಿಗೆ ಮುತ್ತಿಗೆ ಯತ್ನ – ಬಿಗುವಿನ ವಾತಾವರಣ
ಪ್ರತಿಭಟನೆಯ ಕಾರು ಗರಿಗೆದರಿದಂತೆ, ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ದಿಢೀರ್ ಯತ್ನಿಸಿದರು. ಈ ವೇಳೆ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಪಿಸಿಸಿ ಕಚೇರಿಯ ಸುತ್ತಲೂ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಕ್ವೀನ್ಸ್ ರಸ್ತೆಯುದ್ದಕ್ಕೂ ಬೃಹತ್ ಪೊಲೀಸ್ ಪಡೆ ಹಾಗೂ ಕೆಎಸ್‌ಆರ್‌ಪಿ (KSRP) ತುಕುಡಿಗಳನ್ನು ನಿಯೋಜಿಸಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ!
ಕಳೆದ ಮೇ ತಿಂಗಳಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸುಮಾರು 11ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರೊಫೆಸರ್ ಬಿಮೋಲ್ ಅಕೋಯಿಜಮ್ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವುದಾಗಿ ಅಧಿಕೃತ ದೂರುಗಳನ್ನು ದಾಖಲಿಸಿದ್ದರು. ಪರೀಕ್ಷೆಗಳ ವೈವಾ (Viva) ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಅನುಚಿತ ಹಾಗೂ ಅಸಭ್ಯ ಹೇಳಿಕೆಗಳನ್ನು ನೀಡುತ್ತಿದ್ದರು. ಕ್ಯಾಂಪಸ್‌ನಲ್ಲಿರುವ ತಮ್ಮ ನಿವಾಸಕ್ಕೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅನುಚಿತವಾಗಿ ವರ್ತಿಸುವುದು, ಸೆಮಿಸ್ಟರ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ನೀಡಲು ಲೈಂಗಿಕ ಬೇಡಿಕೆಗಳನ್ನು ಇಟ್ಟಿರುವ ಹಲವು ಗಂಭೀರ ಆರೋಪಗಳನ್ನು ವಿದ್ಯಾರ್ಥಿನಿಯರು ಮಾಡಿದ್ದಾರೆ.
ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು (Internal Committee) ನಡೆಸಿದ ವಿಸ್ತೃತ ತನಿಖೆಯ ವರದಿ ಹಾಗೂ ಶಿಫಾರಸಿನ ಆಧಾರದ ಮೇಲೆ, ಜೆಎನ್‌ಯು ಆಡಳಿತ ಮಂಡಳಿಯು ಅಕೋಯಿಜಮ್ ಅವರನ್ನು ಅಕ್ಟೋಬರ್ 9ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಜೆಎನ್‌ಯುನ ಮುಖ್ಯ ಭದ್ರತಾ ಅಧಿಕಾರಿಯ ದೂರಿನ ಮೇರೆಗೆ ದೆಹಲಿಯ ವಸಂತ್ ಕುಂಜ್ ನಾರ್ತ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 ಮತ್ತು 79ರ ಅಡಿಯಲ್ಲಿ ಲೈಂಗಿಕ ಕಿರುಕುಳದಡಿ ಎಫ್‌ಐಆರ್ ದಾಖಲಾಗಿದ
ಲೈಂಗಿಕ ಆರೋಪಗಳನ್ನು ತಳ್ಳಿಹಾಕಿದ ಬಿಮೋಲ್ ಅಕೋಯಿಜಮ್
ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲಾ ಆರೋಪಗಳನ್ನು ಬಿಮೋಲ್ ಅಕೋಯಿಜಮ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದು ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ವಿರೋಧಿಗಳು ಹೂಡಿರುವ ರಾಜಕೀಯ ಪಿತೂರಿ (Witch Hunt) ಎಂದು ಅವರು ಆಪಾದಿಸಿದ್ದಾರೆ. ವಿಶ್ವವಿದ್ಯಾಲಯವು ತಮಗೆ ತನಿಖಾ ವರದಿಯ ಪ್ರತಿಯನ್ನು ನೀಡದೆ, ನಿಯಮಾನುಸಾರ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶ ನೀಡದೆ ಏಕಪಕ್ಷೀಯವಾಗಿ ವಜಾ ಮಾಡಿದೆ ಎಂದು ಆರೋಪಿಸಿರುವ ಅವರು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
#Bengaluru #BJPMahilaMorcha #BimolAkoijam #JNUScandal #CongressMP #KPCCProtest #RahulGandhi #SexualHarassmentAllegation #DelhiPolice #KarnatakaNews #UdayakalaNews

Related Posts

Leave a Reply

Your email address will not be published. Required fields are marked *