ಉದಯಕಾಲ ನ್ಯೂಸ್, ಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರ ಸಹೋದರ ಅಮರ್ ಖಂಡ್ರೆಗೆ (Amar Khandre) ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಡಿಸಿಸಿ (DCC) ಬ್ಯಾಂಕ್ ಸದಸ್ಯರಾದ ಅತಿವಾಳ ಕಪಲಾಪುರ ಹಾಗೂ ಶಿವರಾಜ್ ವೀರಶೆಟ್ಟಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜಕೀಯ ಪ್ರಭಾವ ಬಳಸಿ ಅಮರ್ ಖಂಡ್ರೆ ಅವರು ನಿಯಮ ಬಾಹಿರವಾಗಿ ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಬ್ಯಾಂಕಿಂಗ್ ರೆಗ್ಯೂಲೇಶನ್ ಕಾಯ್ದೆ ಮತ್ತು ಆರ್‌ಬಿಐ (RBI) ತಿದ್ದುಪಡಿ ಗವರ್ನರ್ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯು ಸತತವಾಗಿ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರೆಯುವಂತಿಲ್ಲ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದರು.
ಕಲಬುರಗಿ ಹೈಕೋರ್ಟ್ ಪೀಠದ ನಿರ್ದೇಶನ
ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳು ಹಾಗೂ ವಾದವನ್ನು ಗಂಭೀರವಾಗಿ ಪರಿಗಣಿಸಿರುವ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು, ಪ್ರತಿವಾದಿಯಾಗಿರುವ ಅಮರ್ ಖಂಡ್ರೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಮುಂಬರುವ ನವೆಂಬರ್ 5ರಂದು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಬೆಳವಣಿಗೆಯಿಂದಾಗಿ ಸಹಕಾರಿ ರಂಗದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಏನು ಹೊರಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.
#Bidar #AmarKhandre #EshwarKhandre #DCCBank #KarnatakaHighCourt #Kalaburagi #BankingRegulationAct #RBI #PoliticalNews #UdayakalaNews


