Saturday, October 10, 2026
Menu

ಜನತೆಯ ಮತದಾನದ ಹಕ್ಕು ಕಸಿದ ಜ್ಞಾನೇಶ್ ಕುಮಾರ್ ತಪ್ಪನ್ನು ಒಪ್ಪಿಕೊಳ್ಳಬೇಕು: ಸಿಎಂ ಡಿ ಕೆ ಶಿವಕುಮಾರ್ ಆಗ್ರಹ!

ಉದಯಕಾಲ ನ್ಯೂಸ್‌, ನವದೆಹಲಿ: ‘‘ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಕ್ಷಪಾತ ಹಾಗೂ ಏಕಪಕ್ಷೀಯ ನಿರ್ಧಾರದ ಮೂಲಕ ಜನತೆಯ ಮತದಾನದ ಹಕ್ಕನ್ನು ಕಸಿದಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಆಗಿರುವ ತಪ್ಪನ್ನು ಒಪ್ಪಿಕೊಳ್ಳಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ  ದೆಹಲಿಯ ವಿಜಯ್ ಚೌಕ್ ಬಳಿ ಪ್ರತಿಭಟನೆ ನಂತರ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರೂ ವಿರೋಧ ಪಕ್ಷದ ನಾಯಕರನ್ನು ಮುಖ್ಯ ಚುನಾವಣಾ ಆಯುಕ್ತರು ಭೇಟಿಯಾಗುತ್ತಿಲ್ಲ ಎಂದರೆ ಇದರ ಅರ್ಥವೇನು?  ಅವರು ತಪ್ಪು ಮಾಡಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?” ಎಂದರು.

“ಚುನಾವಣಾ ಆಯೋಗ ಸಂವಿಧಾನವನ್ನು ಉಳಿಸಲಿಕ್ಕೆ ಸರ್ಕಾರ ರೂಪಿಸಿರುವ ಸ್ವಾಯತ್ತ ಸಂಸ್ಥೆ. ಈ ಆಯೋಗ ಎಲ್ಲರನ್ನೂ ಸಮಾನತೆಯಿಂದ ನೋಡಬೇಕಾದದ್ದು ಇದರ ಧರ್ಮ. ವಿರೋಧ ಪಕ್ಷ ಇಲ್ಲದೆ ಸರ್ಕಾರ ನಡೆಸುವುದನ್ನು ಯಾವ ಪ್ರಜಾಪ್ರಭುತ್ವವವೂ ಒಪ್ಪದು” ಎಂದರು.

“ಜ್ಞಾನೇಶ್ ಕುಮಾರ್ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ತಪ್ಪಾಗಿದೆ ಎನ್ನುವ ಮಾತನ್ನು ಹೇಳಬೇಕು. ನಮ್ಮ ರಾಜ್ಯದಲ್ಲಿ ನಡೆದಿರುವ ಎಸ್ ಐ ಆರ್ ಅಕ್ರಮದ ಬಗ್ಗೆ ನಾವು ಚುನಾವಣೆ ಆಯೋಗಕ್ಕೆ ದೂರು ನೀಡಿದ ಮೇಲೆ ಒಂದೇ ರಾತ್ರಿಯಲ್ಲಿ ಬದಲಾವಣೆ ಮಾಡಿದ್ದಾರೆ” ಎಂದರು.

 

ಅನ್ಯಾಯದ ವಿರುದ್ದ ದನಿ ಎತ್ತಿದ ನ್ಯಾಯಾಲಯಕ್ಕೆ ಧನ್ಯವಾದ!

“ನಮೂನೆ 6ರ ಬದಲಾವಣೆಗೆ ಅನುಮತಿ ನೀಡಿಲ್ಲ ಎಂದು ಸುಪ್ರಿಂಕೋರ್ಟ್ ಆಯೋಗಕ್ಕೆ ಚಾಟಿ ಬೀಸಿದೆ. ಈ ಅನ್ಯಾಯದ ವಿರುದ್ಧ ದನಿ ಎತ್ತಿದ ನ್ಯಾಯಾಲಯಕ್ಕೆ ಧನ್ಯವಾದಗಳು.‌ ಸುಪ್ರಿಂ ಕೋರ್ಟ್  ಮತ್ತೊಮ್ಮೆ ಮಧ್ಯಪ್ರವೇಶಿಸಿ, ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅದನ್ನು ನಾವು ನಿರೀಕ್ಷಿಸುತ್ತಿದ್ದೇವೆ’ ಎಂದು ಹೇಳಿದರು.

ಚುನಾವಣಾ ಆಯುಕ್ತರು ರಾಜಕೀಯ ಪಕ್ಷದ ಟೂಲ್ ಕಿಟ್ ಅಲ್ಲ!

ಪ್ರಜಾಪ್ರಭುತ್ವ ಜೀವಂತವಾಗಿರಬೇಕು. ಪ್ರಧಾನಿ ಮೋದಿಯವರು ಚುನಾವಣಾ ಆಯುಕ್ತರನ್ನು ಅವರ ಸ್ಥಾನದಿಂದ ಕೆಳಗಿಳಿಯಲು ಸೂಚನೆ ನೀಡಬೇಕು. ಇದು ಪ್ರಧಾನ ಮಂತ್ರಿಯವರ ಕರ್ತವ್ಯ. ಚುನಾವಣಾ ಆಯುಕ್ತರನ್ನು ಈ ರೀತಿಯ ವಿಷಯಗಳಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಆಯುಕ್ತರಾಗಿ ಅವರು ಬಿಜೆಪಿಯ ಕೈಗೊಂಬೆಯಾಗಬಾರದು. ಅವರು ಯಾವುದೇ ರಾಜಕೀಯ ಪಕ್ಷದ ಟೂಲ್ ಆಗಿ ಕೆಲಸ ಮಾಡಬಾರದು” ಎಂದು ಹೇಳಿದರು.

 

“ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಮತೋಲನವನ್ನು ಕಾಯಬೇಕು. ಆದರೆ ಅವರು ತಮ್ಮ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಪ್ರಧಾನಿಯವರು ಜ್ಞಾನೇಶ್ ಕುಮಾರ್ ಅವರ ರಾಜಿನಾಮೆಯನ್ನು ಕೇಳುವ ತಿಳುವಳಿಕೆ ತೋರಲಿದ್ದಾರೆ ಎಂದು ಭಾವಿಸುತ್ತೇನೆ. ಅಲ್ಲದೇ ಈಗಿನ ಎಸ್ ಐಆರ್ ಪ್ರಕ್ರಿಯೆಯನ್ನು ರದ್ದು ಪಡಿಸಿ, ವಿರೋಧಪಕ್ಷದ ಎಲ್ಲ ನಾಯಕರೊಂದಿಗೆ ಚರ್ಚಿಸಿ,  ಮುಕ್ತ ಮತ್ತು ನ್ಯಾಯಯುತ ಎಂದು ಖಚಿತಪಡಿಸಬೇಕು ಹಾಗೂ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಸಿಗುವಂತಹ ಹೊಸ ನೀತಿಯನ್ನು ತರಬೇಕು” ಎಂದರು.

ಮತದಾನದ ಹಕ್ಕು ಕಸಿಯಲು ಬಿಡಲ್ಲ

ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ಮತದಾನದ ಹಕ್ಕಿನ ರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲೂ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಹಾಗೂ ಸಂವಿಧಾನದ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಅರ್ಹ ಮತದಾರರ ಹೆಸರುಗಳನ್ನು ಉಳಿಸುವ ಜತೆಗೆ, ಅನರ್ಹ ಮತಗಳ ಸೇರ್ಪಡೆಯನ್ನೂ ತಡೆಯಬೇಕು. ಈ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಯಾಗಿ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುವಂತೆ ಮಾರ್ಗದರ್ಶನ ಹಾಗೂ ಸಹಕಾರ ನೀಡಿದ್ದೇನೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಅರ್ಹರು ಅರ್ಜಿ ಸಂಖ್ಯೆ 6 ಸಲ್ಲಿಸಬಹುದು. ಕಾನೂನುಬದ್ಧವಾಗಿ ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಮತದಾನದ ಅವಕಾಶ ಸಿಗಬೇಕು. ಮತದಾನದ ಹಕ್ಕಿನ ದುರುಪಯೋಗಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಹೋರಾಟ

ಎಸ್‌ಐಆರ್‌ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿವೆ. ದೆಹಲಿಯ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರು ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಮೂಲಕ ಮತದಾನದ ಹಕ್ಕಿನ ದುರುಪಯೋಗದ ಆರೋಪಗಳನ್ನು ಗಮನಕ್ಕೆ ತರಲು ಪ್ರತಿಪಕ್ಷಗಳ ಒಕ್ಕೂಟ ಮುಂದಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕೇಂದ್ರ ಸರ್ಕಾರದ ಅವಧಿಯಲ್ಲಿ ಮತದಾನದ ಹಕ್ಕಿನ ದುರುಪಯೋಗ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ವಿವಿಧ ರಾಜ್ಯಗಳಲ್ಲೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಎಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ರಕ್ಷಿಸಬೇಕಿದೆ. ಹೀಗಾಗಿ ಎಲ್ಲ ಪಕ್ಷಗಳೂ ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ. ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆ, ಕ್ಷೇತ್ರದಲ್ಲೂ ಮತದಾರರಿಗೆ ಅರಿವು

ರಾಜ್ಯದಲ್ಲಿ ಹೋರಾಟವನ್ನು ಯಾವ ರೀತಿಯಲ್ಲಿ ಮುಂದುವರಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲೂ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಮುಖಂಡರು ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಜನರಿಗೆ ಅರಿವು ಮೂಡಿಸಲಾಗುವುದು. ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ ಸೂಕ್ತ ಕ್ರಮದ ಮೂಲಕ ಅದನ್ನು ಸರಿಪಡಿಸಿಕೊಳ್ಳಲು ನೆರವಾಗಲಾಗುವುದು ಎಂದು ತಿಳಿಸಿದರು.

#Udayakala #UdayakalaNews #DKShivakumar #GyaneshKumar #ElectionCommission #SIRControversy #CongressKarnataka #DelhiProtest #SupremeCourt #IndianPolitics #VoteChori #KarnatakaNews

Related Posts

Leave a Reply

Your email address will not be published. Required fields are marked *