ಉದಯಕಾಲ ನ್ಯೂಸ್, ಮಂಗಳೂರು: ಪಂಜಾಬ್ನಿಂದ ವಾಟರ್ ಪ್ಯೂರಿಫೈಯರ್ ಒಳಗೆ ಬಚ್ಚಿಟ್ಟು ಕೊರಿಯರ್ ಮೂಲಕ ಭಾರಿ ಪ್ರಮಾಣದ ನಿಷೇಧಿತ ಎಂಡಿಎಂಎ (MDMA) ಮಾದಕವಸ್ತು ತರಿಸಿ, ಮಂಗಳೂರು ಹಾಗೂ ಕೇರಳಕ್ಕೆ ಪೂರೈಕೆ ಮಾಡಲು ಸ್ಕೆಚ್ ಹಾಕಿದ್ದ ಅಂತಾರಾಜ್ಯ ಡ್ರಗ್ಸ್ ಜಾಲಕ್ಕೆ ಮಂಗಳೂರು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮೂವರು ಕುಖ್ಯಾತ ಪೆಡ್ಲರ್ಗಳನ್ನು ಬಂಧಿಸಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ರೂ. 1.58 ಕೋಟಿಗೂ ಅಧಿಕ ಮೌಲ್ಯದ 1.797 ಕೆಜಿ ತೂಕದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಉಳ್ಳಾಲದ ಕುಂಪಲ ಡಿ-ಮಾರ್ಟ್ ಬಳಿ ಖೆಡ್ಡಾ
ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ಯುವಜನತೆಯನ್ನು ಗುರಿಯಾಗಿಸಿಕೊಂಡು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. 2026ರ ಅಕ್ಟೋಬರ್ 8ರಂದು ರಾತ್ರಿ 10 ಗಂಟೆಯ ಸುಮಾರಿಗೆ ಉಳ್ಳಾಲ ತಾಲೂಕಿನ ಕುಂಪಲದಲ್ಲಿರುವ ಡಿ-ಮಾರ್ಟ್ ಬಳಿ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ರೆಡ್ಹ್ಯಾಂಡ್ ಆಗಿ ಸೆರೆಹಿಡಿದರು.
*1 ಕೆಜಿ 796.96 ಗ್ರಾಂ MDMA (ಅಂದಕ ಮೌಲ್ಯ: ರೂ. 1,58,34,000)/ ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ,3 ಮೊಬೈಲ್ ಫೋನ್ಗಳು,ಕೊರಿಯರ್ ರಟ್ಟಿನ ಬಾಕ್ಸ್ ಮತ್ತು ವಾಟರ್ ಪ್ಯೂರಿಫೈಯರ್ ಜಪ್ತಿ ಮಾಡಲಾಗಿದ್ದ್ಉ ಇದರ ಮೌಲ್ಯ ಅಂದಾಜು ರೂ. 1,63,84,000 ಆಗಿರುವುದಾಗಿ ಕಮೀಷನರ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಕಾಸರಗೋಡು ಜಿಲ್ಲೆಯ ಮಂಗಳ್ಪಾಡಿ ನಿವಾಸಿ ಅಬ್ದುಲ್ ಹಾಫೀಲ್ (25)ಮಂಗಳೂರಿನ ಕೂಳೂರು ಸಮೀಪದ ಕಸಬಾ ಬೆಂಗ್ರೆ ನಿವಾಸಿ ಜಿಯಾವುಲ್ ಹಕ್ (30) (ಈತ ಈ ಹಿಂದೆ ದುಬೈನ ರಾಸ್ ಅಲ್ ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಸಿಲುಕಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ವಾಪಸಾಗಿದ್ದ) ಹಾಗೂ ಮೂಲತಃ ಜಲ್ಲಿಗುಡ್ಡೆ ಫೈಸಲ್ ನಗರದ ಅಲ್ತಾಫ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳು ಪಂಜಾಬ್ನ ಅಮೃತಸರದಿಂದ ಈ ಭಾರಿ ಪ್ರಮಾಣದ ಎಂಡಿಎಂಎ ಖರೀದಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಲು ವಾಟರ್ ಪ್ಯೂರಿಫೈಯರ್ನ ನೀರು ಸಂಗ್ರಹವಾಗುವ ಭಾಗದೊಳಗೆ ಎಂಡಿಎಂಎ ಪ್ಯಾಕೆಟ್ಗಳನ್ನು ಭದ್ರವಾಗಿ ಅಡಗಿಸಿ, ಕೊರಿಯರ್ ಮೂಲಕ ಮಂಗಳೂರಿಗೆ ರವಾನಿಸಿಕೊಂಡಿದ್ದರು. ಇಲ್ಲಿಂದ ಕರಾವಳಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಚಿಲ್ಲರೆಯಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
#MangalorePolice #CCBMangalore #MDMASeizure #DrugBust #UllalNews #UdayakalaNews #KarnatakaPolice #NDPSAct #CrimeNews #MangaloreUpdates

