ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅಂತಿಮ ಘಟ್ಟ ತಲುಪಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಅಥವಾ ಈಗಿರುವ ಹೆಸರುಗಳನ್ನು ಅಳಿಸುವಂತೆ ಕೋರಿ ಒಟ್ಟು 1,10,654 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ತಿಳಿಸಿದೆ.
ಅಕ್ಟೋಬರ್ 9ರ ವೇಳೆಗೆ ರಾಜ್ಯದಲ್ಲಿ ಒಟ್ಟು 4,51,61,393 ಮತದಾರರಿದ್ದು, ಅವರಲ್ಲಿ 2,24,03,422 ಪುರುಷರು, 2,27,55,113 ಮಹಿಳೆಯರು ಹಾಗೂ 2,858 ತೃತೀಯ ಲಿಂಗದ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.
ಶೇ. 99.80ರಷ್ಟು ನೋಟಿಸ್ ವಿತರಣೆ ಪೂರ್ಣ
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಒಟ್ಟು 43,82,315 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 43,73,745 ನೋಟಿಸ್‌ಗಳನ್ನು ವಿತರಿಸಲಾಗಿದೆ. ಈ ಮೂಲಕ ಶೇ. 99.80ರಷ್ಟು ನೋಟಿಸ್ ವಿತರಣೆ ಪೂರ್ಣಗೊಂಡಿದೆ. ವಿತರಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದಂತೆ 4,088,099 (ಶೇ. 93.47) ವಿಚಾರಣೆಗಳು ಪೂರ್ಣಗೊಂಡಿದ್ದು, ಇನ್ನೂ 2,85,646 ವಿಚಾರಣೆಗಳು ಬಾಕಿ ಉಳಿದಿವೆ.
ನೋಟಿಸ್ ಹಂತದ ಪ್ರಕ್ರಿಯೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು.
23 ಲಕ್ಷಕ್ಕೂ ಹೆಚ್ಚು ವಿವಿಧ ಅರ್ಜಿಗಳು ಸಲ್ಲಿಕೆ
ಜೂನ್ 16ರಿಂದ ಅಕ್ಟೋಬರ್ 8ರವರೆಗೆ ರಾಜ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 23,02,215 ಅರ್ಜಿಗಳು ಸಲ್ಲಿಕೆ, ವಿವರಗಳು ಹೀಗಿವೆ:
ಫಾರಂ-6: 9,52,497 (ಹೊಸ ಹೆಸರು ಸೇರ್ಪಡೆಗೆ)
ಫಾರಂ-6ಎ: 4,712 (ವಿದೇಶಿವಾಸಿ ಭಾರತೀಯರಿಗೆ)
ಫಾರಂ-7: 1,10,654 (ಆಕ್ಷೇಪಣೆ ಹಾಗೂ ಹೆಸರು ಅಳಿಸಲು)
ಫಾರಂ-8: 12,34,352 (ವಿವರಗಳ ತಿದ್ದುಪಡಿ ಹಾಗೂ ವಿಳಾಸ/EPIC ಬದಲಾವಣೆಗೆ)
ಸುಳ್ಳು ಅರ್ಜಿ ಸಲ್ಲಿಸಿದರೆ ಕಠಿಣ ಕಾನೂನು ಕ್ರಮ
ಫಾರಂ-6, 6ಎ, 7 ಮತ್ತು 8ರ ಮೂಲಕ ಸುಳ್ಳು ಹಕ್ಕು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ನೀಡಿರುವುದು ತನಿಖೆಯಲ್ಲಿ ದೃಢಪಟ್ಟರೆ, ಜನಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 31ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಆದರೆ, ಇಂತಹ ಕ್ರಮಕ್ಕೂ ಮುನ್ನ ಮತದಾರರ ನೋಂದಣಿ ನಿಯಮಗಳು-1960ರ ನಿಯಮ 20ರ ಅಡಿಯಲ್ಲಿ ಕಡ್ಡಾಯ ವಿಚಾರಣೆ ನಡೆಸಬೇಕು ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ.
#VoterListRevision #KarnatakaElections #ElectionCommission #CEOایKarnataka #SIR #UdayakalaNews #KarnatakaVoters #Form7 #ElectionUpdates


