ಉದಯಕಾಲ ನ್ಯೂಸ್, ಬೆಂಗಳೂರು : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಅನ್ಯಾಯ, ಮತಪಟ್ಟಿಯಿಂದ ಮತದಾರರೇ ನಾಪತ್ತೆ ಮತ್ತು ಮತದಾರರ ಹಕ್ಕುಗಳ ಮೇಲೆ ನಡೆಯುತ್ತಿರುವ ದಮನ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದವು.CJP ಮುಖಂಡರಾದ ಅಭಿಜೀತ್ ದಿಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ, ನಟ ಪ್ರಕಾಶ್ ರಾಜ್, ಯೂಟ್ಯೂಬರ್ ಧ್ರುವ ರಾಠಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಎಸ್‌ಐಆರ್‌ನಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ‘ಜನತಾ ನ್ಯಾಯಾಲಯ’ ರೂಪದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಅಲ್ಲಿ ನೆರೆದಿದ್ದ ಸಾವಿರಾರು ಪ್ರತಿಭಟನೆಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಮಾತನಾಡಿ, ‘ಓಟು ಚೋರಿ’ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು. ಓಟು ಚೋರಿಗೆ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 70 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಯಿತು. ಅವರು ಮೊದಲು ಮತದಾರರ ಪಟ್ಟಿಯಲ್ಲಿದ್ದರೂ ಚುನಾವಣಾ ಸಂದರ್ಭದಲ್ಲಿ ಪಟ್ಟಿಯಲ್ಲಿ ಇರಲಿಲ್ಲ. ಚುನಾವಣೆಯ ನಂತರ ಅವರು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡರು ಎಂದು ಅವರು ಹೇಳಿದರು.
ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಯಿತು. ಈ ಕುರಿತು ಜ್ಞಾನೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ ಕೇಳುವವರೆಗೆ ವಿವರ ನೀಡಿಲ್ಲ. ಸುಮಾರು 14 ಲಕ್ಷ ಜನರ ಹೆಸರುಗಳನ್ನು ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಹೇಳಿದರು. ಗೋವಾದಲ್ಲೂ 100 ಜನರ ಹೆಸರುಗಳನ್ನು ಸೇರಿಸಲು ಎಆರ್‌ಓ ಗೆ ಸಾಧ್ಯವಾಗಲಿಲ್ಲ ಎಂದರು.
ನಟ, vಚಿಂತಕ ಪ್ರಕಾಶ್ ರಾಜ್ ಮಾತನಾಡಿ, ‘ಬಡವರು, ಬುಡಕಟ್ಟು ಜನಾಂಗದವರು ಹಾಗೂ ಅಲ್ಪಸಂಖ್ಯಾತರ ಮತಗಳು ಡಿಲೀಟ್ ಆಗುತ್ತಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡಿದರೆ, ಅವರ ಜಾಗಕ್ಕೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ಹಾಗಾಗಿ ಪರ್ಯಾಯವಾಗಿ ಎಸ್‌ಐಆರ್ ಪ್ರಕ್ರಿಯೆಯೇ ರದ್ದಾಗಲು ಹೋರಾಡಬೇಕಿದೆ’ ಎಂದು ಉಚ್ಛರಿಸಿದರು.
ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ ಮಾತನಾಡಿ ” ನಾವು ಪ್ರಜಾಪ್ರಭುತ್ವಕ್ಕಾಗಿ ಬೀದಿಗಿಳಿದು ಹೋರಾಡುತ್ತೇವೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ಅಚಲ” ಎಂದು ಹೇಳಿದರು.
#CJP #SIR #AbhijeetDipke #PrakashRaj #Dhruva Rati


