ಉದಯಕಾಲ ನ್ಯೂಸ್, ತುಮಕೂರು: ಹೋಟೆಲ್ಗಳಲ್ಲಿ ಅಡುಗೆ ಎಣ್ಣೆಯನ್ನು ಪದೇ ಪದೆ ಮರುಬಳಕೆ ಮಾಡುವುದರಿಂದ ಉಂಟಾಗುವ ಹೃದಯಾಘಾತ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ (DHO) ಕಚೇರಿಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಡುಗೆ ಎಣ್ಣೆ ಮರುಬಳಕೆ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ತರಲು ಯೋಚಿಸಲಾಗಿದ್ದು, ಹೋಟೆಲ್ ಹಾಗೂ ವ್ಯಾಪಾರಸ್ಥರು ಎಣ್ಣೆಯನ್ನು ಎಲ್ಲಿ ಖರೀದಿಸುತ್ತಾರೋ ಅಲ್ಲಿಯೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ಬಗ್ಗೆ ವಿಶೇಷ ಆ್ಯಪ್ ಒಂದನ್ನು ರೂಪಿಸುವ ಚಿಂತನೆ ನಡೆಯುತ್ತಿದ್ದು, ಇದರ ಮೂಲಕ ಬಳಕೆಯಾದ ಬಳಿಕ ಉಳಿಯುವ ಎಣ್ಣೆಯ ಪ್ರಮಾಣ ಎಷ್ಟು ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.
ತುಮಕೂರು ಜಿಲ್ಲಾ ಆರೋಗ್ಯ ಸುವ್ಯವಸ್ಥೆ
ಜಿಲ್ಲೆಯಲ್ಲಿ ಆಸ್ಪತ್ರೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಜಿಲ್ಲೆಯಲ್ಲಿ ಎದುರಾಗಿರುವ ಔಷಧ ಹಾಗೂ ಉಪಕರಣಗಳ ಕೊರತೆಯನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ನೀಗಿಸಲಾಗುವುದು. ರಾಜ್ಯಾದ್ಯಂತ ವೈದ್ಯರು ಹಾಗೂ ಫಾರ್ಮಾಸಿಸ್ಟ್ಗಳ ಕೊರತೆ ಇದ್ದರೂ, ತುಮಕೂರು ಜಿಲ್ಲೆಯಲ್ಲಿ ಮಾತ್ರ ಶೇ. 100ರಷ್ಟು ವೈದ್ಯರು ಲಭ್ಯವಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ನಕಲಿ ವೈದ್ಯರ ವಿರುದ್ಧ ಮುಲಾಜಿಲ್ಲದೆ ಕ್ರಮ
ಸಮಾಜದ ಆರೋಗ್ಯದ ಜತೆ ಚೆಲ್ಲಾಟವಾಡುವ ನಕಲಿ ವೈದ್ಯರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ನಕಲಿ ವೈದ್ಯರ ಹಿಂದೆ ಯಾವುದೇ ಅಧಿಕಾರಿಗಳಿರಲಿ ಅಥವಾ ಪ್ರಭಾವಿ ರಾಜಕಾರಣಿಗಳಿರಲಿ, ಮುಖ ನೋಡಿ ಸುಮ್ಮನಿರುವುದಿಲ್ಲ. ಇನ್ನು 15 ದಿನಗಳ ಒಳಗೆ ಜಿಲ್ಲೆಯನ್ನು ನಕಲಿ ವೈದ್ಯರಿಂದ ಮುಕ್ತಗೊಳಿಸಿ ಎಲ್ಲವನ್ನೂ ‘ಕ್ಲೀನ್’ ಮಾಡುವಂತೆ ಕಟ್ಟುನಿಟ್ಟಿನ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಇದೇ ವೇಳೆ, ಮುಖ್ಯಮಂತ್ರಿಗಳ ಸ್ಟಿಂಗ್ ಆಪರೇಷನ್ ಹಾಗೂ ಸಚಿವರಿಗೆ ನೀಡಿರುವ ಎಚ್ಚರಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಈ ವಿಚಾರ ನನಗೆ ತಿಳಿದಿಲ್ಲ. ನಾನು ನನ್ನ ಕೆಲಸದಲ್ಲಿ ಸಂಪೂರ್ಣವಾಗಿ ನಿರತನಾಗಿದ್ದೇನೆ. ಅಂದು ಸಚಿವ ಸಂಪುಟ ಸಭೆಯಿಂದ ನಾನು ಬೇಗನೆ ತೆರಳಿದ್ದರಿಂದ ಅಲ್ಲಿ ನಡೆದ ಚರ್ಚೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
#UTKhader #CookingOilBan #TumakuruNews #KarnatakaHealthMinister #FakeDoctorsAction #UdayakalaNews #HealthDepartment #KarnatakaNews


