Thursday, October 08, 2026
Menu

ಆನ್​ಲೈನ್ ಗೇಮ್‌ ವ್ಯಸನ; 4 ಲಕ್ಷ ಹಣ ಕಳೆದುಕೊಂಡ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಉದಯಕಾಲ ನ್ಯೂಸ್‌, ದಾವಣಗೆರೆ: ಆನ್​ಲೈನ್ ಗೇಮ್ ಸೆಳೆತ ಹಾಗೂ ಹಣಕ್ಕಾಗಿ ಸ್ನೇಹಿತರ ಹಿಂಸೆ ಮತ್ತು ಬೆದರಿಕೆಗೆ ಹೆದರಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ.ಪಾಂಡೊಮಟ್ಟಿ ಗ್ರಾಮದ ನಿವಾಸಿ ಮನೋಜ್ ಟಿ.ಆರ್ (13) ಜೀವ ಕಳೆದುಕೊಂಡ ದುರ್ದೈವಿ ವಿದ್ಯಾರ್ಥಿ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧ ಮೃತ ಮನೋಜನ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಮನೋಜ್ ‘ಫ್ರೀ-ಫೈರ್’ (Free Fire) ಆನ್​ಲೈನ್ ಗೇಮ್ ಆ್ಯಪ್‌ಗೆ ಅಂಟಿಕೊಂಡಿದ್ದನು. ಈ ಗೇಮ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಗ್ರಾಮದ ನಾಲ್ವರು ಅಪ್ರಾಪ್ತ ಬಾಲಕರು ಆತನಿಗೆ ನಿರಂತರವಾಗಿ ಒತ್ತಾಯಿಸಿದ್ದರು. ಸ್ನೇಹಿತರ ಮಾತಿಗೆ ಬಾಗಿದ ಬಾಲಕ ಮನೋಜ್, ಮನೆಯಿಂದ ಹಂತ ಹಂತವಾಗಿ ಸುಮಾರು 4 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದನು.

ನಂತರ ಸ್ನೇಹಿತರು ಮತ್ತಷ್ಟು ಹಣ ತರುವಂತೆ ಒತ್ತಾಯಿಸಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಹಣ ತರದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮನೋಜ್ ತನ್ನ ಪೋಷಕರ ಬಳಿ ಅಳಲು ತೋಡಿಕೊಂಡಿದ್ದನು ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಪುತ್ರನ ಸಾವಿಗೆ ಕಾರಣರಾದ ಆ ನಾಲ್ವರು ಬಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರ ಸ್ಪಷ್ಟನೆ
ಘಟನೆ ಕುರಿತು ಚನ್ನಗಿರಿ ಪೊಲೀಸ್ ಠಾಣೆಯ ಪಿಐ ರವೀಶ್ ಮಾತನಾಡಿ, “ಅಪ್ರಾಪ್ತ ಬಾಲಕರು ಫ್ರೀ ಫೈರ್ ಗೇಮ್ ಗೀಳಿನಿಂದ ಈ ಪರಿಸ್ಥಿತಿಗೆ ಬಂದಿದ್ದಾರೆ. ಗೇಮ್‌ಗಾಗಿ ಮನೆಯಿಂದ ಹಣ ತೆಗೆದುಕೊಂಡು ಹೋಗಿರುವ ವಿಷಯ ತಿಳಿದು ಪೋಷಕರು ಬೈದಿರಬಹುದು ಅಥವಾ ಗದರಿರಬಹುದು. ಆದರೆ, ಯಾರೋ ಹಣ ತರಲು ಒತ್ತಾಯಿಸುತ್ತಿದ್ದಾರೆ ಎಂದು ಪೋಷಕರು ಠಾಣೆಗೆ ಬಂದಿದ್ದಾಗ, ಆ ಮಕ್ಕಳನ್ನು ಕರೆಸಿ ಹಣ ಕೊಡಿಸುವುದಾಗಿ ನಾವು ಸಮಾಧಾನ ಮಾಡಿ ಕಳುಹಿಸಿದ್ದೆವು. ಈ ನಡುವೆ ಬಾಲಕ ಮನೋಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಗೆ ತೆರಳುವಾಗ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರಿಂದ ಮನನೊಂದಿರಬಹುದು. ಆದರೂ ಸಾವಿಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಸದ್ಯ ಮೃತ ಬಾಲಕನ ಪೋಷಕರ ದೂರಿನ ಮೇರೆಗೆ ನಾಲ್ವರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಗ್ರಾಮಸ್ಥರ ಕಳವಳ
“ಗ್ರಾಮದಲ್ಲಿ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆನ್​ಲೈನ್ ಗೇಮ್ ವ್ಯಸನಕ್ಕೆ ಬಲಿಯಾಗಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಸ್ನೇಹಿತರು ಗೇಮ್ ಗೀಳು ಹಚ್ಚಿ ಮನೆಯಲ್ಲಿದ್ದ ಲಕ್ಷಾಂತರ ಹಣವನ್ನು ಹಂತ ಹಂತವಾಗಿ ಲಪಟಾಯಿಸಿದ್ದಾರೆ. ಪೋಷಕರು ತಮ್ಮ ಮಕ್ಕಳು ಮೊಬೈಲ್‌ನಲ್ಲಿ ಏನ್ ಮಾಡುತ್ತಿದ್ದಾರೆ, ಯಾರೊಂದಿಗೆ ಒಡನಾಟ ಹೊಂದಿದ್ದಾರೆ ಎಂಬುದರ ಮೇಲೆ ನಿರಂತರವಾಗಿ ಕಣ್ಣಿಡಬೇಕು. ಜೊತೆಗೆ, ಇಂತಹ ಅಪಾಯಕಾರಿ ಆನ್​ಲೈನ್ ಗೇಮ್‌ಗಳ ವಿರುದ್ಧ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥ ರವಿ ಮನವಿ ಮಾಡಿದ್ದಾರೆ.
#OnlineGameAddiction #FreeFireGame #DavangereNews #Channagiri #StudentSuicide #UdayakalaNews #KarnatakaNews #CyberSafety #ParentalControl

Related Posts

Leave a Reply

Your email address will not be published. Required fields are marked *