ಉದಯಕಾಲ ನ್ಯೂಸ್, ಕಲಬುರಗಿ: ಮಕ್ಕಳಾಗಿಲ್ಲ ಎಂದು ನಿರಂತರ ಗಲಾಟೆ ಹಾಗೂ ತವರಿನಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.ಪ್ರಿಯಾಂಕಾ ಎಂಬುವವರೇ ಹತ್ಯೆಗೀಡಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತರ ಪತಿ ಸೂರ್ಯಕಾಂತ್ನನ್ನು ಚಿಂಚೋಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತ್ಮಹತ್ಯೆಯ ನಾಟಕ!
ಮಕ್ಕಳಾಗದ ನೆಪ ಹಾಗೂ ತವರಿನಿಂದ ಹಣ ತರುವಂತೆ ಆರೋಪಿ ಸೂರ್ಯಕಾಂತ್ ಸದಾಕಾಲ ಪ್ರಿಯಾಂಕಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಪ್ರಿಯಾಂಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ದಂಪತಿಗಳ ನಡುವೆ ಗಲಾಟೆ ನಡೆದಿದ್ದು, ರೊಚ್ಚಿಗೆದ್ದ ಸೂರ್ಯಕಾಂತ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಪತ್ನಿ ಮಕ್ಕಳಾಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ದೊಡ್ಡ ನಾಟಕವಾಡಿ ಅಪರಾಧದಿಂದ ಪಾರಾಗಲು ಯತ್ನಿಸಿದ್ದಾನೆ. ಇದನ್ನು ಭೇದಿಸಿದ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಚಿಂಚೋಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಿಯಾಂಕಾ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಸೂರ್ಯಕಾಂತ್ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
**#Kalaburagi #Chincholi #CrimeNews #UdayakalaNews #KarnatakaCrime #WifeMurder #LatestNews**


