ಉದಯಕಾಲ ನ್ಯೂಸ್, ಹೊಸದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಯಶಸ್ಸನ್ನು ಶ್ಲಾಘಿಸಿ, ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಅವರು ಬರೆದಿರುವ ಭಾವನಾತ್ಮಕ ಪತ್ರ ಹಾಗೂ ಲೇಖನವು ಜಾಗತಿಕ ಮಟ್ಟದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿಯವರ ವ್ಯಕ್ತಿತ್ವ ಮತ್ತು ದಕ್ಷತೆಯಿಂದ ತೀವ್ರವಾಗಿ ಪ್ರಭಾವಿತರಾಗಿರುವ ಟೋಬ್ಗೆ, ಅವರನ್ನು ವಿಷ್ಣುವಿನ ಅವತಾರಕ್ಕೆ ಹೋಲಿಸುವುದರ ಜೊತೆಗೆ ತಮಗೆ ಅವರು ಹಿರಿಯಣ್ಣನಿದ್ದಂತೆ ಎಂದು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ಜುಲೈ 27, 2019 ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದನ್ನು ಟೋಬ್ಗೆ ಸ್ಮರಿಸಿದ್ದಾರೆ. ಆ ಸಂದರ್ಭದಲ್ಲಿ ಭೂತಾನ್ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತಿದ್ದು, ತಮ್ಮ ಬಳಿ ಯಾವುದೇ ಸಂಸತ್ತಿನ ಪ್ರಾತಿನಿಧ್ಯವಿರಲಿಲ್ಲ ಅಥವಾ ತಾನು ಪ್ರಧಾನಿಯೂ ಆಗಿರಲಿಲ್ಲ. ಒಬ್ಬ ಸಾಮಾನ್ಯ ನಾಗರಿಕನಾಗಿ ಭೇಟಿ ನೀಡಿದ್ದರೂ ಪ್ರಧಾನಿ ಮೋದಿ ನೀಡಿದ ಬೆಂಬಲ ಮತ್ತು ಹಿರಿಯ ಸಹೋದರನಂತೆ ತೋರಿಸಿದ ಪ್ರೀತಿಯನ್ನು ಟೋಬ್ಗೆ ಸ್ಮರಿಸಿದ್ದಾರೆ.
ವಿಷ್ಣುವಿನ ಪರಮಾವತಾರ
ನಮ್ಮ ಪ್ರದೇಶದಲ್ಲಿ ಜ್ಞಾನಿ ಹಾಗೂ ಜಾಗೃತ ಆಡಳಿತಗಾರರನ್ನು ಬಹಳ ಹಿಂದಿನಿಂದಲೂ ದೈವಿ ಸ್ವರೂಪವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ತಾನು ‘ವಿಷ್ಣುವಿನ ಅವತಾರ’ ಎಂದು ಪರಿಗಣಿಸಿರುವುದಾಗಿ ಅವರು ವಿವರಿಸಿದ್ದಾರೆ. ಸುಮಾರು 13 ವರ್ಷಗಳ ಕಾಲ ಗುಜರಾತ್ ಅನ್ನು ಯಶಸ್ವಿಯಾಗಿ ಆಳುವ ಮೂಲಕ ಮೂಲಸೌಕರ್ಯ, ಹೂಡಿಕೆ ಮತ್ತು ಅಭಿವೃದ್ಧಿಯಲ್ಲಿ ಆ ರಾಜ್ಯವನ್ನು ದೇಶಕ್ಕೇ ಮಾದರಿಯಾಗಿಸಿದ್ದನ್ನು ಅವರು ಕೊಂಡಾಡಿದ್ದಾರೆ. ಅದೇ ದೃಷ್ಟಿಕೋನವನ್ನು ಇಡೀ ಭಾರತಕ್ಕೆ ವಿಸ್ತರಿಸಿ ಉತ್ಪಾದನೆ, ತಂತ್ರಜ್ಞಾನ ಮತ್ತು ಹಣಕಾಸು ಸೇರ್ಪಡೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದಾರೆ ಎಂದಿದ್ದಾರೆ.
ಬೌದ್ಧ ಸಂಪ್ರದಾಯ ಹಾಗೂ ನಾಯಕತ್ವದ ಗುಣಗಳು
ಭೂತಾನ್ನ ಬೌದ್ಧ ಸಂಪ್ರದಾಯದಲ್ಲಿರುವ ಮಂಜುಶ್ರೀ (ಬುದ್ಧಿವಂತಿಕೆ), ಅವಲೋಕಿತೇಶ್ವರ (ಕರುಣೆ) ಮತ್ತು ವಜ್ರಪಾಣಿ (ಧೈರ್ಯ) ಎಂಬ ತ್ರಿಮೂರ್ತಿಗಳ ಗುಣಗಳನ್ನು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ತಿಳಿಸಿದ್ದಾರೆ. ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (“Viksit Bharat”) ರೂಪಿಸುವ ಸ್ಪಷ್ಟ ಗುರಿ ಮತ್ತು ರಾಷ್ಟ್ರೀಯ ಧ್ಯೇಯವನ್ನು ಪ್ರಧಾನಿ ಮೋದಿ ದೇಶಕ್ಕೆ ನೀಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
#NarendraModi #Bhutan #TsheringTobgay #PMModi #ViksitBharat #IndiaBhutanRelations #UdayakalaNews


