Wednesday, October 07, 2026
Menu

ಗುರುಕುಲದ ಸಂಪ್ ಸ್ವಚ್ಛಗೊಳಿಸುವಾಗ ವಿಷಾನಿಲದಿಂದ 4 ವಿದ್ಯಾರ್ಥಿಗಳು ಸಾವು!

ಉದಯಕಾಲ ನ್ಯೂಸ್‌, ಮಥುರಾ (ಉತ್ತರ ಪ್ರದೇಶ): ವೃಂದಾವನದ ಸಂಸ್ಕೃತ ಗುರುಕುಲ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ನೀರಿನ ಸಂಪ್ ಸ್ವಚ್ಛಗೊಳಿಸಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ವಿಷಕಾರಿ ಅನಿಲ ಸೇವನೆಯಿಂದ ದುರ್ಮರಣಕ್ಕೀಡಾಗಿರುವ ಅತ್ಯಂತ ದಾರುಣ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ದುರ್ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಗುರುಕುಲದ ಆಡಳಿತ ಮಂಡಳಿ ಹಾಗೂ ನಿರ್ವಾಹಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ದುರ್ಘಟನೆಯ ವಿವರ
ಗುರುಕುಲ ಕ್ಯಾಂಪಸ್‌ನಲ್ಲಿರುವ ನೀರಿನ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ, ಆರಂಭದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಪರಿಶೀಲನೆಗಾಗಿ ಟ್ಯಾಂಕ್ ಒಳಗೆ ಇಳಿಸಲಾಗಿತ್ತು. ಆ ವಿದ್ಯಾರ್ಥಿ ವಾಪಸ್ ಮೇಲಕ್ಕೆ ಬಾರದಿದ್ದಾಗ, ಆತನನ್ನು ಹುಡುಕಲು ಮತ್ತು ಪರಿಸ್ಥಿತಿ ನೋಡಲು ಇನ್ನುಳಿದ ನಾಲ್ವರು ವಿದ್ಯಾರ್ಥಿಗಳನ್ನು ಟ್ಯಾಂಕ್‌ ಒಳಗೆ ಕಳುಹಿಸಲಾಗಿದೆ. ಆದರೆ, ಟ್ಯಾಂಕ್‌ನಲ್ಲಿದ್ದ ವಿಷಕಾರಿ ಅನಿಲದಿಂದಾಗಿ ಐವರೂ ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಸ್ಥಳೀಯ ನಿವಾಸಿಗಳು ಹಾಗೂ ಇತರೆ ವಿದ್ಯಾರ್ಥಿಗಳು ಟ್ಯಾಂಕ್‌ನಿಂದ ಅವರನ್ನು ಹೊರತೆಗೆದರಾದರೂ, ಅಷ್ಟರಲ್ಲಾಗಲೇ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಓರ್ವ ವಿದ್ಯಾರ್ಥಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಮೋನು ಕಟಾರೆ (20), ದೇವಾಂಶ್ (17), ವಿಷ್ಣು (18) ಮತ್ತು ಆರ್ಯ (18) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಯನ್ನು ರುದ್ರಾಕ್ಷ ಎಂದು ಹೆಸರಿಸಲಾಗಿದೆ.

ಪೊಲೀಸ್ ಹಾಗೂ ಜಿಲ್ಲಾಡಳಿತದ ಕ್ರಮ

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಮಾತನಾಡಿ, “ಟ್ಯಾಂಕ್ ಒಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಇಡೀ ಘಟನೆಯ ಕುರಿತು ಉನ್ನತ ಮಟ್ಟದ ಕೂಲಂಕಷ ತನಿಖೆ ನಡೆಸಲಾಗುವುದು. ವಿದ್ಯಾರ್ಥಿಗಳನ್ನು ಅಪಾಯಕಾರಿ ಕೆಲಸಕ್ಕೆ ಹಚ್ಚಿ ನಿರ್ಲಕ್ಷ್ಯ ತೋರಿದ ಹಾಗೂ ಘಟನೆಯ ಬಳಿಕ ತಲೆಮರೆಸಿಕೊಂಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.
#MathuraTragedy #Udayakala #GurukulAccident #UttarPradeshNews #Vrindavan #StudentDeath #BreakingNews #PoliceInvestigation

Related Posts

Leave a Reply

Your email address will not be published. Required fields are marked *