Wednesday, October 07, 2026
Menu

ರಾಜ್ಯ ಸರ್ಕಾರಕ್ಕೆ ‘ಸ್ಟಿಂಗ್ ಆಪರೇಷನ್’ ಆತಂಕ: ಹುಷಾರಾಗಿರಲು ಸಚಿವರಿಗೆ ಸಿಎಂ ಎಚ್ಚರಿಕೆ!

ಉದಯಕಾಲ ನ್ಯೂಸ್‌, ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮುಖಾಂತರ ರಹಸ್ಯ ಕಾರ್ಯಾಚರಣೆ (‘ಸ್ಟಿಂಗ್ ಆಪರೇಷನ್’) ನಡೆಸಲು ವಿಪಕ್ಷಗಳು ತೆರೆಮರೆಯಲ್ಲಿ ದೊಡ್ಡ ಮಟ್ಟದ ಕಸರತ್ತು ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಎಚ್ಚರಿಕೆ ನೀಡಿರುವುದಾಗಿ ರಾಜಕೀಯ ಮೂಲಗಳು ತಿಳಿಸಿವೆ.ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಸಿಎಂ, ಸಚಿವರಿಗೆ ಅತಿ ಎಚ್ಚರಿಕೆಯಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ.

ಎರಡು ತಂಡಗಳಿಂದ ಹದ್ದಿನ ಕಣ್ಣು!
ಸರ್ಕಾರದ ಪ್ರತಿಯೊಂದು ಹೆಜ್ಜೆಯನ್ನೂ ನಿಗೂಢವಾಗಿ ಗಮನಿಸಲು ಬೃಹತ್ ಖಾಸಗಿ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಎರಡು ಪ್ರತ್ಯೇಕ ತಂಡಗಳು ಸಚಿವರ ಚಲನವಲನಗಳ ಮೇಲೆ ನಿಗಾ ಇರಿಸಿವೆ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿರುವುದಾಗಿ ಸಿಎಂ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.

ವಿಪಕ್ಷಗಳ ಷಡ್ಯಂತ್ರ
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಖಾಸಗಿ ಏಜೆನ್ಸಿಗಳ ಮೂಲಕ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು, ಸಚಿವರು ಯಾರನ್ನು ಭೇಟಿಯಾಗುತ್ತಾರೆ ಹಾಗೂ ಎಲ್ಲಿಗೆ ತೆರಳುತ್ತಾರೆ ಎಂಬ ಪ್ರತಿಯೊಂದು ಚಟುವಟಿಕೆಯನ್ನು ರೆಕಾರ್ಡ್ ಮಾಡಿ ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸುತ್ತಿವೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಗುಪ್ತಚರ ಮಾಹಿತಿ ಆಧರಿಸಿ ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಲಾಗಿರುವ ಪ್ರಮುಖ ಐವರು ಸಚಿವರ ಜೊತೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿದ್ದ ಪ್ರತಿಯೊಬ್ಬ ಸಚಿವರಿಗೂ ತಮ್ಮ ಸಾರ್ವಜನಿಕ ಮತ್ತು ವೈಯಕ್ತಿಕ ಸಂವಹನ ಹಾಗೂ ನಡವಳಿಕೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುವಂತೆ ನೀಡಿರುವ ಈ ಸಂದೇಶವು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
#DKShivakumar #Udayakala #StingOperation #KarnatakaPolitics #Congress #BJPJDS #BangaloreNews #KarnatakaGovernment

Related Posts

Leave a Reply

Your email address will not be published. Required fields are marked *