ಉದಯಕಾಲ ನ್ಯೂಸ್, ಚೆನ್ನೈ: ತಮಿಳುನಾಡಿನಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೌನವನ್ನು ಪ್ರಶ್ನಿಸಿ ಪ್ರತಿಪಕ್ಷ ಡಿಎಂಕೆ (DMK) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ, ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ರಾಹುಲ್ ಗಾಂಧಿ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ರಾಹುಲ್ ಹೋರಾಟ, ಡಿಎಂಕೆ ಕೆಂಡಾಮಂಡಲ!
ಚುನಾವಣಾ ಆಯೋಗದ ಎಸ್ಐಆರ್ (SIR) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಮರುದಿನವೇ ಡಿಎಂಕೆಯಿಂದ ಈ ತೀಕ್ಷ್ಣ ಪ್ರತಿಕ್ರಿಯೆ ಹೊರಬಿದ್ದಿದೆ.
ರಾಷ್ಟ್ರಮಟ್ಟದಲ್ಲೊಂದು ನ್ಯಾಯ, ತಮಿಳುನಾಡಿಗೆ ಮತ್ತೊಂದೇ?
ಚುನಾವಣಾ ಆಯೋಗದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ, ತಮಿಳುನಾಡಿನಲ್ಲಿ ನಡೆದಿರುವ ಲಕ್ಷಾಂತರ ಮತದಾರರ ಹೆಸರಿನ ನಾಪತ್ತೆ ಕುರಿತು ದೇಶವ್ಯಾಪಿ ಧ್ವನಿ ಎತ್ತುತ್ತಿಲ್ಲವೇಕೆ ಎಂದು ಡಿಎಂಕೆ ವಕ್ತಾರರು ಪ್ರಶ್ನಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ನಂತರ ರಚನೆಯಾದ ಎಲ್ಲಾ ರಾಜ್ಯ ಸರ್ಕಾರಗಳನ್ನು ವಿಸರ್ಜಿಸಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ಇದುವರೆಗೆ ಬಹಿರಂಗವಾಗಿ ಬೆಂಬಲಿಸಿಲ್ಲ ಎಂದೂ ಆಕ್ಷೇಪಿಸಿದ್ದಾರೆ.
ನಟ ವಿಜಯ್ ಕಂಡರೆ ಭಯವೇ?
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಹೆದರಿಕೊಂಡಿರುವ ರಾಹುಲ್, ತಮಿಳುನಾಡಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅಣ್ಣಾದೊರೈ, ರಾಹುಲ್ ಗಾಂಧಿ ಅವರನ್ನು ಒಬ್ಬ ‘ಕಪಟಿ’ ಎಂದು ಜರಿದಿದ್ದಾರೆ.
ತಮಿಳುನಾಡಿನಲ್ಲಿ 20,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾದ 135 ಕ್ಷೇತ್ರಗಳ ಪೈಕಿ 84 ಕ್ಷೇತ್ರಗಳಲ್ಲಿ ಟಿವಿಕೆ ಜಯಭೇರಿ ಬಾರಿಸಿದೆ ಮತ್ತು 80,000ಕ್ಕೂ ಹೆಚ್ಚು ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ 10 ಕ್ಷೇತ್ರಗಳಲ್ಲೂ ಟಿವಿಕೆಯೇ ಗೆಲುವು ಸಾಧಿಸಿದೆ ಎಂದು ದೂರಿದ್ದಾರೆ. ಈ ಗೆಲುವು ಹಾಗೂ ಎಸ್ಐಆರ್ ಮತ ಅಳಿಸುವಿಕೆಗೆ ಸಂಬಂಧವಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮೈತ್ರಿ ಕಡಿತದ ಮುಂದುವರಿದ ಭಾಗ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ಮೈತ್ರಿ ಸಂಪೂರ್ಣವಾಗಿ ಮುರಿದುಬಿದ್ದಿದೆ. ಕಾಂಗ್ರೆಸ್ ಹಳೆಯ ಮಿತ್ರಪಕ್ಷವಾದ ಡಿಎಂಕೆಯೊಂದಿಗಿನ ಸಂಬಂಧ ಕಡಿದುಕೊಂಡು ನಟ ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡಿತ್ತು. ಅಂದಿನಿಂದ ಉಭಯ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಡಿಎಂಕೆ ‘ಇಂಡಿಯಾ’ ಒಕ್ಕೂಟದಲ್ಲಿದ್ದರೂ ಮಂಗಳವಾರ ರಾಹುಲ್ ಗಾಂಧಿ ನೇತೃತ್ವದ ಸಂಸದರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿರಲಿಲ್ಲ.
#SIRControversy #RahulGandhi #DMK #Udayakala #TamilNaduPolitics #Vijay #TVK #ElectionCommission #IndianPolitics


