Wednesday, October 07, 2026
Menu

ರೆಪೋ ದರ ಏರಿಕೆ: ಸಾಲಗಾರರಿಗೆ ಬಿಗ್ ಶಾಕ್, ದುಬಾರಿಯಾಗಲಿದೆ ಇಎಂಐ!

ಉದಯಕಾಲ ನ್ಯೂಸ್, ಮುಂಬೈ:ನಿರೀಕ್ಷೆಯಂತೆ ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಹೆಚ್ಚಿಸಿದ್ದು, ಗೃಹ ಮತ್ತು ವಾಹನ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಇಎಂಐ (EMI) ಮತ್ತಷ್ಟು ದುಬಾರಿಯಾಗುವುದು ಖಚಿತವಾಗಿದೆ.ದೇಶದಲ್ಲಿ ಹಣದುಬ್ಬರ ಏರಿಕೆಯ ಭೀತಿಯ ಹಿನ್ನೆಲೆಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) 25 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ. 0.25) ದರ ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇ. 5.50ಕ್ಕೆ ಏರಿಕೆಯಾಗಿದೆ. ಈ ಹಿಂದೆ 2023ರ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ರೆಪೋ ದರವನ್ನು ಹೆಚ್ಚಿಸಲಾಗಿತ್ತು. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಬಡ್ಡಿದರ ಹೆಚ್ಚಳ ಇದಾಗಿದ್ದು, ಆರು ಸದಸ್ಯರಿದ್ದ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ದರ ಕಡಿತದ ಸಾಧ್ಯತೆ ಸಂಪೂರ್ಣ ದೂರವಾಗಿದ್ದು, ಅಗತ್ಯಬಿದ್ದರೆ ಮತ್ತಷ್ಟು ದರ ಏರಿಕೆಯ ಸುಳಿವನ್ನು ಆರ್‌ಬಿಐ ನೀಡಿದೆ.

ದರ ಏರಿಕೆಗೆ ಪ್ರಮುಖ ಕಾರಣಗಳು
ಕಚ್ಚಾ ತೈಲ ಬೆಲೆ ಏರಿಕೆ: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ.
ಆಹಾರ ಧಾನ್ಯಗಳ ಬೆಲೆ ಏರಿಕೆ ಭೀತಿ: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಆಹಾರ ಧಾನ್ಯಗಳ ಬೆಲೆ ಏರಿಕೆಯ ಆತಂಕ ಎದುರಾಗಿದೆ.
ರೂಪಾಯಿ ಮೌಲ್ಯ ಕುಸಿತ: ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದು ಆಮದು ವೆಚ್ಚವನ್ನು ಹೆಚ್ಚಿಸಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾತನಾಡಿ, ಕಳೆದ ವರ್ಷದಂತೆ ಹಣದುಬ್ಬರ ಪರಿಸ್ಥಿತಿಯಿಂದ ಬಡ್ಡಿದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂದಿದ್ದಾರೆ. ಸದ್ಯ ಬಡ್ಡಿದರ ಕಡಿತದ ಪ್ರಶ್ನೆಯೇ ಇಲ್ಲದಿದ್ದು, ಮುಂದಿನ ನಿರ್ಧಾರಗಳು ಸ್ಥಿರತೆ ಅಥವಾ ಹೆಚ್ಚಳದ ಕಡೆಗೆ ಇರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಡಿಪಿ ಮತ್ತು ಹಣದುಬ್ಬರ ಮುನ್ನೋಟ

ಬಡ್ಡಿದರ ಹೆಚ್ಚಳದ ನಡುವೆಯೂ ದೇಶದ ಆರ್ಥಿಕತೆಯ ಬಲವರ್ಧನೆಯನ್ನು ಗಮನಿಸಿ ಆರ್‌ಬಿಐ 2026-27ನೇ ಹಣಕಾಸು ವರ್ಷದ ಜಿಡಿಪಿ (GDP) ಬೆಳವಣಿಗೆ ಮುನ್ನೋಟವನ್ನು ಶೇ. 6.7 ರಿಂದ ಶೇ. 7.1ಕ್ಕೆ ಹೆಚ್ಚಿಸಿದೆ. ಹಾಗೆಯೇ, ಹಣದುಬ್ಬರದ ಗುರಿಯನ್ನು ಹಿಂದಿನ ಶೇ. 5.0 ರಿಂದ ಶೇ. 5.2ಕ್ಕೆ ಏರಿಸಲಾಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಪ್ರಮುಖ ಏಷ್ಯನ್ ದೇಶಗಳು ಬಿಗಿ ಆರ್ಥಿಕ ನೀತಿ ಅನುಸರಿಸುತ್ತಿರುವ ಬೆನ್ನಲ್ಲೇ ಆರ್‌ಬಿಐ ಕೂಡ ಅದೇ ಹಾದಿ ಹಿಡಿದಿದೆ.
ರೆಪೋ ದರ ಎಂದರೇನು?
ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿಯ ಸಾಲವನ್ನು ನೀಡುವ ಬಡ್ಡಿ ದರವನ್ನೇ ರೆಪೋ ದರ (Repo Rate) ಎನ್ನಲಾಗುತ್ತದೆ. ಬ್ಯಾಂಕುಗಳು ಸರ್ಕಾರದ ಭದ್ರತಾ ಪತ್ರಗಳನ್ನು ಅಡಮಾನವಿಟ್ಟು ಈ ಸಾಲ ಪಡೆಯುತ್ತವೆ. ರೆಪೋ ದರ ಏರಿಕೆಯಿಂದ ಬ್ಯಾಂಕುಗಳಿಗೆ ಸಾಲ ಪಡೆಯುವ ವೆಚ್ಚ ಹೆಚ್ಚಾಗುತ್ತದೆ. ಪರಿಣಾಮವಾಗಿ ಗ್ರಾಹಕರಿಗೆ ನೀಡುವ ಗೃಹ, ವಾಹನ ಸಾಲಗಳ ಬಡ್ಡಿ ದರ ಹಾಗೂ ಇಎಂಐ ಏರಿಕೆಯಾಗಲಿದ್ದು, ಇದು ಹಣದುಬ್ಬರ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
#RBI #RepoRate #Udayakala #SanjayMalhotra #HomeLoan #Inflation #IndianEconomy #EMIHike

Related Posts

Leave a Reply

Your email address will not be published. Required fields are marked *