ವಾಷಿಂಗ್ಟನ್: ಅಮೆರಿಕದ ಮಿಸ್ಸೌರಿ ರಾಜ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮೂಲದ 31 ವರ್ಷದ ಭಾರತೀಯ ಮಹಿಳೆ ದಾರಂ ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮರಿಪೆಡಾ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಅವರು ಮಿಸ್ಸೌರಿಯ ಸೇಂಟ್ ಲೂಯಿಸ್ ಪ್ರದೇಶದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು. ಶನಿವಾರ ರಾತ್ರಿ ರೆಸ್ಟೋರೆಂಟ್ ಕೆಲಸ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ದುರ್ಘಟನೆಯ ವಿವರ
ಈ ಅಪಘಾತದ ತೀವ್ರತೆಗೆ ಸುಪ್ರಿಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಕಾರಿನಲ್ಲಿದ್ದ ಮತ್ತೊಬ್ಬ ಭಾರತೀಯ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸುಮಾರು ಐದು ವರ್ಷಗಳ ಹಿಂದೆ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೊಡಮುರಿ ರಂಜಿತ್ ಅವರನ್ನು ಸುಪ್ರಿಯಾ ವಿವಾಹವಾಗಿದ್ದರು. ದಂಪತಿಗೆ ಎರಡೂವರೆ ವರ್ಷದ ಮುದ್ದಾದ ಮಗನಿದ್ದಾನೆ. ತಾಯಿಯನ್ನು ಕಳೆದುಕೊಂಡು ಅಥಿಯಿಲ್ಲದಂತಾಗಿರುವ ಕಂದಮ್ಮನ ಹಾಗೂ ಕುಟುಂಬದ ರೋದನ ಮುಗಿಲುಮುಟ್ಟಿದೆ.
ಮೃತದೇಹ ಭಾರತಕ್ಕೆ ತರಲು ಮನವಿ
ಸುಪ್ರಿಯಾ ಅವರ ಹಠಾತ್ ಸಾವಿನ ಸುದ್ದಿ ತಿಳಿದು ಭಾರತದಲ್ಲಿರುವ ತಂದೆ-ತಾಯಿ ಹಾಗೂ ಅತ್ತೆ-ಮಾವ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗಳ ಅಂತಿಮ ದರ್ಶನ ಪಡೆದು ತಾಯ್ನಾಡಿನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ಅನುಕೂಲ ಮಾಡಿಕೊಡುವಂತೆ ಮೃತರ ತಂದೆ ದಾರಂ ಶ್ರೀನಿವಾಸ್ ತೆಲಂಗಾಣ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಾಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ಅಮೆರಿಕದಲ್ಲಿರುವ ಮಗುವಿನ ಭವಿಷ್ಯ, ಶಿಕ್ಷಣ ಹಾಗೂ ವೈದ್ಯಕೀಯ ಮತ್ತು ದೈನಂದಿನ ಅಗತ್ಯಗಳಿಗಾಗಿ ಕುಟುಂಬದ ವತಿಯಿಂದ `ಗೋ ಫಂಡ್ ಮೀ’ (GoFundMe) ಆನ್‌ಲೈನ್ ಅಭಿಯಾನದ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತಿದೆ.
#USAccident #TelanganaWoman #MissouriCrash #Mahabubabad #StLouis #UdayakalaNews #IndianCommunityUS #RoadAccident #NRIUpdates


