ಡಿಸೆಂಬರ್ನಲ್ಲಿ `ಬೆಂಗಳೂರು ಜಾತ್ರೆ’: ಕೃಷ್ಣ ಬೈರೇಗೌಡ
ಬೆಂಗಳೂರು: ರಾಜಧಾನಿಯ ಜನರಿಗಾಗಿ ವಿನೂತವಾಗಿ ‘ನಮ್ಮ ಬೆಂಗಳೂರು ಊರಹಬ್ಬ’ ಹಾಗೂ ‘ಬೆಂಗಳೂರು ಉತ್ಸವ’ದ ಭಾಗವಾಗಿ ಡಿಸೆಂಬರ್ 4ರಿಂದ 13ರವರೆಗೆ ಭವ್ಯವಾದ `ಬೆಂಗಳೂರು ಜಾತ್ರೆ’ (Bengaluru Jathre)ಯನ್ನು ಆಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈಗಾಗಲೇ ಜನಮನ ಗೆದ್ದಿರುವ ‘ಫ್ರೀಡಂ ಹಬ್ಬ’ದ ಮಾದರಿಯಲ್ಲಿಯೇ ಬೆಂಗಳೂರು ಜನರಿಗಾಗಿ ಊರ ಹಬ್ಬವನ್ನು ನಡೆಸಬೇಕು ಎಂಬ ಮುಖ್ಯಮಂತ್ರಿಯವರ ಆಶಯದಂತೆ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಭಾಗಿತ್ವ
ಬೆಂಗಳೂರು ಮೆಟ್ರೋ, ಪೊಲೀಸ್ ಇಲಾಖೆ, ಬೆಸ್ಕಾಂ ಸೇರಿದಂತೆ ಸರ್ಕಾರದ ವಿವಿಧ ಅಂಗ ಸಂಸ್ಥೆಗಳೆಲ್ಲವೂ ಒಗ್ಗೂಡಿ ಈ ಬೆಂಗಳೂರು ಜಾತ್ರೆಯನ್ನು ಯಶಸ್ವಿಗೊಳಿಸಲಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳಿಗೂ ಅಧಿಕೃತ ಪತ್ರ ಬರೆಯಲಾಗಿದೆ. ನಗರದಲ್ಲಿರುವ ಐಟಿ ಹಬ್ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಇಲಾಖೆಗಳು ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಂತಹ ಪ್ರತಿಷ್ಠಿತ ಸಂಸ್ಥೆಗಳಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗುವುದು ಎಂದು ಅವರು ತಿಳಿಸಿದರು. ಜೊತೆಗೆ, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಸಹ ಆಯೋಜಕರಾಗಿ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.
ಕಲೆ, ಸಂಸ್ಕೃತಿ ಮತ್ತು ಆಹಾರ ವೈವಿಧ್ಯತೆಯ ಅನಾವರಣ
ಈ ಜಾತ್ರೆಯಲ್ಲಿ ಕರ್ನಾಟಕದ ಸಮಗ್ರ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ.
– ನಗರದ 5 ಪ್ರಮುಖ ವಲಯಗಳಲ್ಲಿ (Zones) ವಿವಿಧ ಕಾರ್ಯಕ್ರಮಗಳು ಜರುಗಲಿವೆ.
– ನೆರೆ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಇತರ ರಾಜ್ಯಗಳ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದ್ದು, ಭಾರತೀಯ ಕಲೆಯ ವಿಶಿಷ್ಟ ಅನಾವರಣ ಇಲ್ಲಿರಲಿದೆ.
– ಅಪಾರ್ಟ್ ಮೆಂಟ್ ಅಸೋಸಿಯೇಷನ್ಗಳಿಗೂ ಸ್ಥಳಾವಕಾಶ ಕಲ್ಪಿಸಲಾಗುತ್ತಿದ್ದು, ಅವರು ಕೂಡ ನೃತ್ಯ, ಸಂಗೀತದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಬಹುದು.
– ಹೋಟೆಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರು ಜಾತ್ರೆಯಲ್ಲಿ ಕರ್ನಾಟಕದ ವಿಶೇಷ ಆಹಾರ ಶೈಲಿಯನ್ನು ಬಿಂಬಿಸುವ ಭರ್ಜರಿ ‘ಫುಡ್ ಫೆಸ್ಟ್’ (Food Fest) ಆಯೋಜಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
#BengaluruJathre #KrishnaByreGowda #NammaBengaluru #BengaluruFestival #UdayakalaNews #KarnatakaCulture #FoodFestival #BengaluruNews


