Saturday, October 03, 2026
Menu

ಭಾಷಾ ವಿವಾದ: ಹಿಂದಿ ಫಲಕವಿಟ್ಟ ಇಬ್ಬರು ಇಂಜಿನಿಯರ್‌ಗಳ ಅಮಾನತು!

ತಮಿಳುನಾಡಿನಲ್ಲಿ ಹಿಂದಿ ಫಲಕ; ಇಬ್ಬರು ಇಂಜಿನಿಯರ್‌ಗಳ ಅಮಾನತು!
ಚೆನ್ನೈ:ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥಂಕುಳಂ-ನಜರೆತ್ ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಫಲಕಗಳಲ್ಲಿ ಹಿಂದಿ ಭಾಷೆಯನ್ನು ಬಳಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಪ್ರಮಾದಕ್ಕೆ ಕಾರಣರಾದ ಇಬ್ಬರು ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ರಾಜ್ಯದ ದ್ವಿಭಾಷಾ ನೀತಿಗೆ ವಿರುದ್ಧವಾಗಿ ಹಿಂದಿ ಫಲಕಗಳನ್ನು ಅಳವಡಿಸಿರುವುದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ತಮಿಳುನಾಡು ಹೆದ್ದಾರಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ಈ ಪ್ರಮಾದಕ್ಕೆ ಕಾರಣರಾಗಿದ್ದು, ತಮಿಳುನಾಡು ಸರ್ಕಾರದ ದ್ವಿಭಾಷಾ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಅಲ್ಲದೆ, ಇವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.

ಸಿಎಂ ವಿಜಯ್‌ ವಿರುದ್ಧ ಎಂ.ಕೆ. ಸ್ಟಾಲಿನ್ ತೀವ್ರ ಆಕ್ರೋಶ

ಈ ಬೆಳವಣಿಗೆಯ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದ ಮೂಲಕ ಟಿವಿಕೆ (TVK) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇಷ್ಟು ದಿನ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಮಾತ್ರ ತಮಿಳುನಾಡು ಎದುರಿಸುತ್ತಾ ಬಂದಿತ್ತು. ಆದರೆ, ಈಗ ಸ್ವತಃ ರಾಜ್ಯ ಸರ್ಕಾರವೇ ಆ ಕೆಲಸಕ್ಕೆ ಮುಂದಾಗಿರುವುದು ಇವರು ವಾಗ್ದಾನ ಮಾಡಿದ ಬದಲಾವಣೆ ಇರಬಹುದು” ಎಂದು ಲೇವಡಿ ಮಾಡಿದ್ದಾರೆ.

“ಎಲ್ಲ ವಿಷಯಗಳಲ್ಲೂ ಮೊದಲು ಜನರ ಅಭಿಪ್ರಾಯ ಅಥವಾ ಆಳವನ್ನು ಪರೀಕ್ಷಿಸಿ, ನಂತರ ವಿರೋಧ ವ್ಯಕ್ತವಾದ ಕೂಡಲೇ ‘ಯು-ಟರ್ನ್’ (U-turn) ಹೊಡೆಯುವ ಟಿವಿಕೆ ಸರ್ಕಾರ ಇದಾಗಿದೆಯೇ?” ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ. ಅಲ್ಲದೆ, “ಉತ್ತರ ಭಾರತದ ಇನ್‌ಫ್ಲುಯೆನ್ಸರ್‌ಗಳಿಗಾಗಿ ‘ರೀಲ್ಸ್ ಸರ್ಕಾರ’ ನಡೆಸುತ್ತಿರುವ ಟಿವಿಕೆ ಸರ್ಕಾರಕ್ಕೆ ಇದರ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತೇನೆ. ತಮಿಳುನಾಡಿನ ದ್ವಿಭಾಷಾ ನೀತಿಯು ಈ ನಾಡಿನ ಜೀವನಾಡಿ, ಇದರೊಂದಿಗೆ ಚೆಲ್ಲಾಟವಾಡಬೇಡಿ” ಎಂದು ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.

ತಮಿಳುನಾಡಿನ ದ್ವಿಭಾಷಾ ನೀತಿ

ತಮಿಳುನಾಡಿನಲ್ಲಿ 1968ರ ವಿಧಾನಸಭೆಯ ನಿರ್ಣಯದ ಕಾಲದಿಂದಲೂ ತಮಿಳು ಮತ್ತು ಇಂಗ್ಲಿಷ್ ಮಾತ್ರ ಇರುವ ದ್ವಿಭಾಷಾ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮೂರು ಭಾಷೆಗಳ ಸೂತ್ರವನ್ನು ವಿರೋಧಿಸುತ್ತ ಬಂದಿರುವ ತಮಿಳುನಾಡಿನಲ್ಲಿ, ಪ್ರಸಕ್ತ ವಿವಾದದ ಹಿನ್ನೆಲೆಯಲ್ಲಿ ಹೊಸ ನಾಮಫಲಕಗಳನ್ನು ಅಳವಡಿಸಲಾಗಿದ್ದು, ಭಾಷಾ ವಿವಾದ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
#TamilNadu #LanguageRow #MKStalin #CMVijay #TVK #HindiImposition #TwoLanguagePolicy #Thoothukudi #UdayakalaNews #SouthIndiaNews

Related Posts

Leave a Reply

Your email address will not be published. Required fields are marked *