ರಾಜ್ಯದಿಂದ ಲೋಕಸಭೆಗೆ ಚುನಾಯಿತರಾದ ೨೮ ಸಂಸದರು ಒಗ್ಗೂಡಿ ಒಮ್ಮತದಿಂದ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಆಗ್ರಹಪೂರ್ವಕವಾಗಿ ಧ್ವನಿ ಎತ್ತದಿರುವುದು ದುರದೃಷ್ಟಕರ.
ರಾಜ್ಯದ ಅಭಿವೃದ್ಧಿ ಮತ್ತು ಕೇಂದ್ರದ ಅನುದಾನದ ವಿಚಾರದಲ್ಲಿ ಪಕ್ಷ ರಾಜಕಾರಣ ಸಲ್ಲದು. ಇದು ಅನಪೇಕ್ಷಣೀಯ. ಬೀದರ್‌ನಿಂದ ಚಾಮರಾಜನಗರದವರೆಗೆ ಮಳೆರಾಯನ ಅವಕೃಪೆಯಿಂದ ನಾಡಿನ ಜನತೆಯ ಸಂಕಷ್ಟ ಮತ್ತು ಬವಣೆ ಉಂಟಾಗಿದೆ.ಇವರ ಸಂಕಷ್ಟಕ್ಕೆ ನೆರವಾಗುವುದು ಎಲ್ಲ ಜನಪ್ರತಿನಿಧಿಗಳ ಹೊಣೆ. ಪಶ್ಚಿಮ ಘಟ್ಟಗಳ ಅರಣ್ಯವಾಸಿಗಳ ಸಮಸ್ಯೆ ಇರಲಿ. ಜನ- ಜಾನುವಾರಿಗೆ ಕುಡಿಯಲು ನೀರಿಲ್ಲದೆ ಪರದಾಡಿದ ಇತರ ಜಿಲ್ಲೆಗಳ ಸಾಮಾನ್ಯನ ಬವಣೆ ಆಗಲಿ. ಇವರಿಬ್ಬರ ಸಮಸ್ಯೆಯೂ ಒಂದೇ. ಇದನ್ನು ಬಗೆಹರಿಸಲು ಆಡಳಿತಾರೂಢ ಮತ್ತು ವಿರೋಧಪಕ್ಷಗಳು ಎರಡೂ ಒಗ್ಗೂಡಿ ಕುಂದುಕೊರತೆ ಬಗೆಹರಿಸಬೇಕಿರುವುದು ವಿಧಿತ.
ಮೊನ್ನೆಯಷ್ಟೇ ನಡೆದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ನಾಡಿನ ಬರ ಮತ್ತು ಅರಣ್ಯವಾಸಿಗಳ ಬವಣೆ ಬಗ್ಗೆ ಕೂಲಂಕಷ ಚರ್ಚೆ ನಡೆದಿದೆ. ಅಲ್ಲದೆ ಕೇಂದ್ರ ಸರ್ಕಾರದಿಂದ ನೆರವು ಕೋರುವ ದಿಶೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಎಲ್ಲ ವಿಪಕ್ಷಗಳ ಪ್ರಮುಖರನ್ನು ಒಳಗೊಂಡ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಲು ಮನವಿ ಮಾಡಿರುವುದು ಸರಿಯಷ್ಟೆ. ಅದರೆ ಈ ಮನವಿಗೆ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಓಗೊಟ್ಟಿಲ್ಲ ಮತ್ತು ಮುಖ್ಯಮಂತ್ರಿಗಳ ಮನವಿಗೆ ತಾವು ಸ್ಪಂದಿಸುವ ಪ್ರಮೇಯವಿಲ್ಲ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿಲ್ಲಿಯಲ್ಲಿ ಕರ್ನಾಟಕದ ಪರವಾಗಿ ಏಕಧ್ವನಿ ಮೂಡದಿರಲು ಈ ರಾಜಕೀಯ ಮನೋಧೋರಣೆಯೇ ಕಾರಣ ಎಂಬುದನ್ನು ಒತ್ತಿಹೇಳುವ ಅಗತ್ಯವಿಲ್ಲ. ಎಲ್ಲಿಯವರೆಗೆ ನಾಡಿನ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಜನತೆಯ ಪರವಾಗಿ ಆಲೋಚಿಸಿ ಕ್ರಮ ಜರುಗಿಸುವುದಿಲ್ಲವೋ, ಅಲ್ಲಿಯವರೆಗೂ ದಿಲ್ಲಿಯಲ್ಲಿ ಕರ್ನಾಟಕದ ಕಟು ವಾಸ್ತವ ಹಾಗೂ ನೈಜ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕೂಡಾ ದೊರಕುವುದಿಲ್ಲ.
ಸಂಸದೀಯ ವ್ಯವಸ್ಥೆ ಇರುವುದೇ ಜನತೆಯ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನಸೆಳೆಯುವುದು. ರಾಜ್ಯದಿಂದ ಲೋಕಸಭೆಗೆ ಚುನಾಯಿತರಾದ ೨೮ ಸಂಸದರು ಒಗ್ಗೂಡಿ ಸದನದಲ್ಲಿ ಒಮ್ಮತದಿಂದ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಆಗ್ರಹಪೂರ್ವಕವಾಗಿ ಧ್ವನಿ ಎತ್ತದಿರುವುದು ದುರದೃಷ್ಟಕರ. ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಸಮಸ್ಯೆಗಳಿಗೆ ಸ್ಪಂದಿಸಿ ಸಕಾಲದಲ್ಲಿ ನೆರವು ಒದಗಿಸುವುದು ಕೇಂದ್ರದ ಹೊಣೆ. ಈ ವಿಷಯದಲ್ಲಿ ತಾರತಮ್ಮ ಸಲ್ಲದು. ಹಣಕಾಸು ನೆರವು ಮತ್ತು ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ಯಾವಾಗಲೂ ಲಭಿಸುವ ನೆರವಿನ ಮೊತ್ತ ಅತ್ಯಲ್ಪ.
ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕದ ಇದುವರೆಗಿನ ಪಾತ್ರವೂ ಇಲ್ಲಿ ಮುಖ್ಯ. ಎಲ್ಲ ಬಾಬ್ತುಗಳಲ್ಲಿ ಕೇಂದ್ರ ಖಜಾನೆಗೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ಅತಿ ದೊಡ್ಡ ಎರಡನೆ ರಾಜ್ಯ. ದುರದೃಷ್ಟವಶಾತ್ ಈ ಪ್ರಮುಖಾಂಶವನ್ನು ಕೇಂದ್ರ ಸರ್ಕಾರ ಅತ್ಯವಶ್ಯಕವಾಗಿ ಅನುದಾನ ನೀಡುವ ಸಮಯದಲ್ಲಿ ಪರಿಗಣಿಸಬೇಕಿರವ ಸಹಜ ನ್ಯಾಯದ ಅಂಶ. ತೆರಿಗೆಗಳನ್ನೇ ಸರಿಯಾಗಿ ಕಟ್ಟದ ಕೆಲ ದೊಡ್ಡ ರಾಜ್ಯಗಳಿಗೆ ದಾರಾಳ ಅನುದಾನ ಲಭಿಸುವುದೆಂದರೆ ಇದು ಪ್ರಶ್ನಾರ್ಹ. ಅನುದಾನ ಕೋರಿ ಸುಪ್ರೀಂಕೋರ್ಟ್‌ಗೆ ಮೊರೆಯಿಡುವಂತಹ ಪರಿಸ್ಥಿತಿ ಈಗ ರಾಜ್ಯದ್ದು. ಪಾರ್ಟಿ ಪಾಲಿಟಿಕ್ಸ್‌ನಿಂದ ನಾಡಿನ ಜನತೆ ತತ್ತರಿಸುವರೆಂದರೆ ಇದೊಂದು ಪ್ರಜಾತಂತ್ರದ ಮಹಾಪೀಡೆ ಎನ್ನದೆ ವಿಧಿಯಿಲ್ಲ.


