Tuesday, September 29, 2026
Menu

ಬರದ ಬವಣೆ: ದುಂದುವೆಚ್ಚಕ್ಕೆ ಬೇಕಿದೆ ಲಗಾಮು

ಇಡೀ ರಾಜ್ಯವಿಂದು ಬರದ ಕರಿ ನೆರಳಿನಲ್ಲಿರುವಾಗ ಸರ್ಕಾರಿ ಯಂತ್ರಾಂಗದ ಅದ್ದೂರಿ ಮತ್ತು ಆಡಂಬರಗಳಿಗೂ ಕಡಿವಾಣ ಬೀಳುವ ಅವಸರವಿದೆ. ಸರ್ಕಾರದ ಅನಗತ್ಯ ಮತ್ತು ದುಂದುವೆಚ್ಚಗಳಿಗೂ ಕಡಿವಾಣ ಬೇಕಿದೆ.

ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರ. ಜನ- ಜಾನುವಾರುವಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ. ಬಿಂದಿಗೆಯ ನೀರಿಗೂ ತತ್ವಾರ. ಮಿಗಿಲಾಗಿ ವಿದ್ಯುತ್ ಪೂರೈಕೆಗೂ ಸಮಸ್ಯೆ. ಬತ್ತಿದ ಕೆರೆ, ಕುಂಟೆ, ಜೀವಸತ್ವ ಕಳೆದುಕೊಂಡ ಜೀವನದಿ. ಕಡಿಮೆಯಾದ ಒಳಹರಿವು.. ಇದು ಬೀದರ್‌ನಿಂದ ಚಾಮರಾಜನಗರದವರೆಗೆ ಕಂಡು ಬಂದ ರಾಜ್ಯದ ಇಂದಿನ ಚಿತ್ರಣ.

ಬರ ಘೋಷಣೆ ವಿಚಾರದಲ್ಲಿ ಮೊನ್ನೆಯಷ್ಟೆ ಮುಗಿದ ನಾಡಿನ ವಿಧಾನಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ನಡೆದಿದೆ. ಬರ ಘೋಷಣೆಯಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂಬ ಸಾರ್ವತ್ರಿಕ ಆರೋಪವಿದೆ. ಆದರೆ ಕೇಂದ್ರ ಸರ್ಕಾರ ರೂಪಿಸಿರುವ ಮಾನದಂಡಗಳನ್ನು ಅನುಸರಿಸಿ ಬರ ಘೋಷಣೆ ಮಾಡಲಾಗಿದೆ ಎಂದು ಕಂದಾಯ ಮಂತ್ರಿಯೂ ಅದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿರುವುದು ಗಮನಾರ್ಹ. ಇದು ವಾಸ್ತವ ಕೂಡಾ. ಒಟ್ಟಿನಲ್ಲಿ ರಾಜ್ಯದ ಮುಂದಿರುವ ಏಕೈಕ ಗಂಭೀರ ಪ್ರಶ್ನೆ ಎಂದರೆ , ಇಂತಹ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಸರ್ಕಾರದ ಪೂರ್ವ ಘೋಷಿತ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕೇ, ಕೈಬಿಡಬೇಕೇ ಎಂಬುದು.

ಈಗಾಗಲೇ ಕಳೆದ ಮೂರೂವರೆ ವರ್ಷಗಳಿಂದ ಜಾರಿಯಲ್ಲಿರುವ ಗ್ತಾರಂಟಿ ಯೋಜನೆಗಳಿಂದ ಸಾವಿರಾರು ಕೋಟಿ ರೂಪಾಯಿಗಳು ಖರ್ಚಾಗಿರುವುದು ನಿಜ. ಈ ಯೋಜನೆಗಳಿಗಾಗಿ ರಾಜ್ಯದ ಹಿಂದಿನ ಮುಂಗಡಪತ್ರದಲ್ಲಿ ಹಣಕಾಸು ನಿಗದಿಯಾಗಿದ್ದರೂ, ಇದನ್ನು ಅತ್ಯವಸರ ಪರಿಸ್ಥಿತಿಯಲ್ಲಿ ಬಳಸಲು ಸರ್ಕಾರಕ್ಕೆ ಎಲ್ಲ ಅವಕಾಶಗಳಿವೆ. ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ತುರ್ತಾಗಿ ಸ್ಪಂದಿಸಿ ರಾಜ್ಯಕ್ಕೆ ನೆರವು ಬೇಕೆಂದು ಮೊರೆಯಿಡುವುದು ಸಂಪ್ರದಾಯಿಕವಷ್ಟೆ. . ಅದೇನೆ ಇರಲಿ. ರಾಜ್ಯದಲ್ಲಿ ತಲೆದೋರಿದ ಬರ ನೀಗಲು ಬೇಕಿರುವಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡುವುದು ಅಸಾಧ್ಯ. ಈ ದಿಶೆಯಲ್ಲಿ ರಾಜ್ಯ ಸರ್ಕಾರದ ಮುಂದಿರುವ ಏಕೈಕ ಪರಿಹಾರವೊಂದೇ . ಲಭ್ಯ ಹಣಕಾಸಿನ ಪರಿಮಿತಿಯೊಳಗೆ ಪರಿಸ್ಥಿತಿಯನ್ನು ನೀಗುವುದು ಮತ್ತು ಬರ ಪರಿಹಾರಕ್ಕೆ ಹೆಚ್ಚುವರಿಯಾಗಿ ಬೇಕಿರುವ ಹಣಕಾಸನ್ನು ಪರ್ಯಾಯ ಮಾರ್ಗಗಳಿಂದ ಕಲೆ ಹಾಕುವುದು.

ಇಡೀ ರಾಜ್ಯವಿಂದು ಬರದ ಕರಿ ನೆರಳಿನಲ್ಲಿರುವಾಗ ಸರ್ಕಾರಿ ಯಂತ್ರಾಂಗದ ಅದ್ದೂರಿ ಮತ್ತು ಆಡಂಬರಗಳಿಗೂ ಕಡಿವಾಣ ಬೀಳುವ ಅವಸರವಿದೆ. ಸರ್ಕಾರದ ಅನಗತ್ಯ ಮತ್ತು ದುಂದುವೆಚ್ಚಗಳಿಗೂ ಕಡಿವಾಣ ಬೇಕಿದೆ. ಕಾರ್ಯಾಂಗ ಮತ್ತು ಮಂತ್ರಿಗಳ ಸಾರಿಗೆ ಮತ್ತು ದಿನಭತ್ಯೆಗಳ ಮೇಲೂ ನಿರ್ಬಂಧವಿರಲಿ. ಮಿಗಿಲಾಗಿ ಅಧಿಕಾರಿಗಳ ಭ್ರಷ್ಟತೆಗೂ ಮಿತಿ ಇರಲಿ. ಇವೆಲ್ಲವನ್ನೂ ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಸುಧಾರಣೆಗೊಳಿಸಿದಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಕೂಡಾ ತಹಬದಿಗೆ ಬಂದೀತು.

ಕೇಂದ್ರ ಅಧ್ಯಯನ ತಂಡವು ನಾಡಿನ ಕೃಷ್ಣಾ ಮತ್ತು ಕಾವೇರಿ ಕಣಿವೆಯ ಭಾಗಗಳಿಗೆ ಭೇಟಿ ನೀಡಿ, ತದನಂತರ ಕೇಂದ್ರಕ್ಕೆ ವರದಿ ನೀಡಲಿದೆ. ಇದೊಂದು ದೀರ್ಘಕಾಲಿಕ ಪ್ರಕ್ರಿಯೆ. ಮಿಗಿಲಾಗಿ ಈ ತಂಡವು ಕರ್ನಾಟಕದಲ್ಲಿ ಬರ ಪರಿಸ್ಥಿತಿಯೇ ಇಲ್ಲ ಎಂದು ವರದಿ ನೀಡಿದರೂ ಅಚ್ಚರಿಯಿಲ್ಲ. ಇಂತಹ ವರದಿಗಳು ಮತ್ತು ಕೇಂದ್ರ ಸಮೀಕ್ಷೆಗಳು ಈ ರಾಜ್ಯಕ್ಕೆ ಹೊಸದೇನೂ ಅಲ್ಲ. ಒಟ್ಟಿನಲ್ಲಿ ಈ ಪರಿಸ್ಥಿತಿಯಿಂದ ರಾಜ್ಯದ ಜನತೆಯನ್ನು ಪಾರು ಮಾಡುವುದು ಮತ್ತು ಮಾಡುತಿರುವುದು ವರುಣರಾಯ ಎಂಬುದಂತೂ ಪರಮಸತ್ಯ.

Related Posts

Leave a Reply

Your email address will not be published. Required fields are marked *