ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಮುಜಾಹಿದ್ದಿನ್ ಪ್ರಮುಖ ಭಟ್ಕಳ್ ರಿಯಾಜ್ ಮೊದಲಾದ ಕಿರಾತಕರಿಗೆಲ್ಲರಿಗೂ ಪಾಕ್ ಸ್ವರ್ಗ ಮತ್ತು ಸುರಕ್ಷಿತ ತಾಣವಾಗಿರುವುದು ಕಟುಸತ್ಯ. ಇಂತಹ ದೇಶದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಅಮೆರಿಕ ಮತ್ತು ಚೀನಾ ಕೂಡಾ, ಉಗ್ರರ ದಮನದ ವಿಚಾರದಲ್ಲಿ ಪಾಕ್‌ಗೆ ಎಚ್ಚರಿಕೆ ನೀಡದಿರುವುದು ಸೋಜಿಗ.
ಜಾಗತಿಕ ಮಟ್ಟದಲ್ಲಿ ಉಗ್ರಗಾಮಿಗಳ ದಮನವಾಗದೆ ಜಗತ್ತಿಗೆ ನೆಮ್ಮದಿ- ಹಾಗೂ ಶಾಂತಿ ಇಲ್ಲ. ಇದು ಸಾರ್ವಕಾಲಿಕ ಸತ್ಯ. ಇದಕ್ಕಾಗಿ ಇಂದು ಜಗತ್ತಿನ ಎಲ್ಲ ಪ್ರಜಾತಾಂತ್ರಿಕ ದೇಶಗಳು ಏಕಧ್ವನಿಯಲ್ಲಿ ಶ್ರಮಿಸಬೇಕಿರುವ ಅನಿವಾರ್ಯತೆ ಇದೆ. ಕಂಕುಳಿನಲ್ಲಿ ದೊಣ್ಣೆ ಇಟ್ಟುಕೊಂಡು ಕೈಯಲ್ಲಿ ಆಶೀರ್ವಾದ ಮಾಡಿದರೆ ಯಾವ ಫಲ ಮತ್ತು ಪ್ರಯೋಜನವೂ ಇಲ್ಲ. ಭಾರತದ ವಿದೇಶಾಂಗ ಮಂತ್ರಿ ಈ ದಿಶೆಯಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಈಗ ಮತ್ತೊಮ್ಮೆ ಭಾರತದ ವಿದೇಶಿ ನೀತಿ ಮತ್ತು ಉಗ್ರರ ದಮನವನ್ನು ಒತ್ತಿ ಹೇಳಿರುವುದು ಗಮನಾರ್ಹ.
ಭಾರತದ ಮೇಲೆ ಇದುವರೆಗೆ ನಡೆದ ಉಗ್ರರ ದಾಳಿ ಮತ್ತು ಘೋರ ಕೃತ್ಯಗಳ ಹಿಂದೆ ನೇರ ಕೈವಾಡವಿರುವ ಸೈಯದ್ ಹಫೀಜ್ ವಿಚಾರದಲ್ಲಿ ಪಾಕಿಸ್ಥಾನವು ಈಗಲೂ ಅದೇ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಭಾರತ ಘೋಷಿಸಿ ಹಲವಾರು ವರ್ಷಗಳೇ ಆಗಿದ್ದರೂ, ಆರೋಪಿಯನ್ನು ಹಿಡಿದು ಭಾರತಕ್ಕೆ ಒಪ್ಪಿಸಲು ಪಾಕ್ ಮುಂದಾಗಿಲ್ಲ. ಹೀಗಿರಬೇಕಾದರೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಭಯೋತ್ಪಾದನೆ ವಿರುದ್ದ ಪುಂಖಾನುಪುಂಖ ಭಾಷಣ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.
ಪಾಕ್ ಪ್ರಧಾನಿ ಶಹಬಾಜ್ ಹಫೀಜ್ ವಿಚಾರದಲ್ಲಿ ಯಾವ ಸ್ಪಷ್ಟ ಉತ್ತರವನ್ನೂ ನೀಡದಿರುವುದು ಈ ದೇಶದ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸುತ್ತದೆ. ಉಗ್ರಗಾಮಿಗಳನ್ನು ತನ್ನ ನೆಲೆಯಲ್ಲಿ ಹಲವಾರು ವರ್ಷಗಳಿಂದ ಪೋಷಿಸಿಕೊಂಡು ಬಂದಿರುವ ಪಾಕಿಸ್ಥಾನಕ್ಕೆ ಜಾಗತಿಕ ಶಾಂತಿ ಮತ್ತು ನೆಮ್ಮದಿ ಎಂಬಂತಹ ಪ್ರಜಾಸತ್ತಾತ್ಮಕ ನಿಲುವು ಮತ್ತು ನೀತಿ ವಾಸ್ವವಿಕವಾಗಿ ಅನ್ವಯವಾಗದು. ಮಿಗಿಲಾಗಿ ಪಾಕಿಸ್ಥಾನದಲ್ಲಿ ಉಗ್ರರನ್ನು ಒಂದೆಡೆ ಪೋಷಿಸುತ್ತಲೆ ಇವರಿಗೆ ಎಲ್ಲ ಬಗೆಯ ಮಾರಕ ಆಯುಧಗಳನ್ನು ನೀಡಿ ಘೋರ ಅಪರಾಧಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಈ ದೇಶಕ್ಕೆ ಸಂಪೂರ್ಣವಾಗಿ ಉಗ್ರರನ್ನು ಸದೆಬಡಿಯುವ ಶಕ್ತಿ ಇಲ್ಲ. ಇದು ಎಲ್ಲ ದೇಶಗಳಿಗೂ ಗೊತ್ತಿರುವ ವಿಚಾರ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಮುಜಾಹಿದ್ದಿನ್ ಪ್ರಮುಖ ಭಟ್ಕಳ್ ರಿಯಾಜ್ ಮೊದಲಾದ ಕಿರಾತಕರಿಗೆಲ್ಲರಿಗೂ ಇಂದು ಪಾಕ್ ಸ್ವರ್ಗ ಮತ್ತು ಸುರಕ್ಷಿತ ತಾಣವಾಗಿರುವುದು ಕಟುಸತ್ಯ. ಇಂತಹ ದೇಶದ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಅಮೆರಿಕ ಮತ್ತು ಚೀನಾ ಕೂಡಾ, ಉಗ್ರರ ದಮನದ ವಿಚಾರದಲ್ಲಿ ಪಾಕ್‌ಗೆ ಎಚ್ಚರಿಕೆ ನೀಡದಿರುವುದು ಸೋಜಿಗ. ಧರ್ಮದ ಹೆಸರಿನಲ್ಲಿ ಕೊಲ್ಲಿ ದೇಶಗಳನ್ನು ಒಳಗೊಂಡ ಜಾಗತಿಕ ಮಟ್ಟದ ವೇದಿಕೆಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕ್ ಪ್ರಯತ್ನಿಸಿದರೂ, ಇದು ಫಲಕಾರಿ ಆಗಿಲ್ಲ. ಒಟ್ಟಿನಲ್ಲಿ ಪಾಕಿಸ್ಥಾನವು ಏನೇ ಹೇಳಿದರೂ ಇದನ್ನು ಇಂದು ಪ್ರಪಂಚದ ಇತರೆ ದೇಶಗಳು ಇದನ್ನು ನಂಬುವ ಸ್ಥಿತಿಯಲ್ಲಿಲ್ಲ. ಪ್ರತಿ ಕ್ಷಣವೂ ಉಗ್ರರೆಂಬ ವಿಷಸರ್ಪಗಳನ್ನು ಹುಟ್ಟು ಹಾಕುವುದರಲ್ಲಿ ಮತ್ತು ಇವರನ್ನು ರಕ್ಷಿಸುವ ಕೆಲಸದಲ್ಲಿಯೆ ತೊಡಗಿರುವ ಪಾಕ್ ಆರ್ಥಿಕವಾಗಿ ಮತ್ತಷ್ಟು ದುರ್ಬಲಗೊಂಡು ಚಿಂತಾಜನಕ ಸ್ಥಿತಿಯನ್ನು ತಲುಪುವುದು ಖಂಡಿತ.


