Saturday, September 19, 2026
Menu

76ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ

ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಕುಳಿತಿದ್ದ ದೇಶದ ಪಾರ್ಲಿಮೆಂಟ್‌ನಲ್ಲಿ  ಗಂಭೀರವಾಗಿ ಆಲೋಚಿಸುವ ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಅವರೇ ಮೊದಲಿಗರು.

ಪ್ರಜಾತಂತ್ರ ದೇಶದಲ್ಲಿ ಓರ್ವ ಚಾಯ್‌ವಾಲ ಕೂಡಾ ಪ್ರಧಾನಿ ಆಗಬಲ್ಲ ಎಂಬುದಕ್ಕೆ ಭಾರತದ ಸಂವಿಧಾನ ಒಂದು ಅಪ್ಪಟ ನಿದರ್ಶನ. ಮೂರು ಅವಧಿಗಳಿಗೆ ರಾಜ್ಯವೊಂದರ ಮುಖ್ಯಮಂತ್ರಿಯಾಗಿ , ತರುವಾಯ ದೇಶದ ಪ್ರಧಾನಿಯಾಗಿ ಮೂರನೆ ಭಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದೆಂದರೆ ಅದು ಸುಲಭದ ಮಾತಲ್ಲ. ರಾಜಕಾರಣದಲ್ಲಿ ಇದರ ಸಾಧನೆಗೆ ವೈಯಕ್ತಿಕ ಬದ್ದತೆ, ಕರ್ತವ್ಯಪ್ರಜ್ಞೆ ಮತ್ತು ದೈಹಿಕ- ಮಾನಸಿಕ ದೃಢತೆ ಅತಿ ಮುಖ್ಯ. ಈ ದಿಶೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಳೆದ ೨೫ ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಮಹತ್ತರ ಘಟ್ಟಗಳನ್ನು ದಾಟಿ ಮುಂದೆ ಸಾಗಿರುವುದು ಶ್ಲಾಘನೀಯ.

ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿರುವ ದೇಶದ ಪ್ರಧಾನಿಗೆ ಇಂತಹ ಸಾಧನೆಯೇನೂ ಅತೀತವಲ್ಲ. ಏಕೆಂದರೆ ದೇಶ ಸೇವೆ ಎಂದರೆ ಈಶ ಸೇವೆಯೇ. ಇದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ತೊಡಗಿಸಿಕೊಂಡ ಪ್ರತಿಯೋರ್ವ ನಾಯಕನು ಇಂದು ತಮ್ಮ ತನು, ಮನ ಮತ್ತು ಧನವನ್ನು ದೇಶಕ್ಕೆ ಅರ್ಪಿಸಿ ದುಡಿಯುವ ಪರಿಶುದ್ಧ ಭಾವನೆಯನ್ನು ಹೊಂದಿರಬೇಕಷ್ಟೆ.

ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರನ ಬೇಷರತ್ ಬೆಂಬಲ ಮತ್ತು ಮತದಿಂದ ಮೆಜಾರಿಟಿ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಪಾರ್ಟಿಗೆ, ಇಂತಹ ಪಾರ್ಟಿಯನ್ನು ದೇಶದ ಸಂಸತ್ತಿನಲ್ಲಿ ಪ್ರತಿನಿಧಿಸುವ ಸಭಾ ನಾಯಕನ ಪಾತ್ರ ಅತಿಮುಖ್ಯ. ಈ ದಿಶೆಯಲ್ಲಿ ದೇಶದ ಲೋಕಸಭೆಯ ಸಭಾನಾಯಕನಾಗಿ ಮೋದಿ ಯಶಸ್ಸು ಕಂಡಿದ್ದಾರೆ.

ಪ್ರಜಾತಂತ್ರದಲ್ಲಿ ನಾಯಕನ ಮೇಲೆ ಜನತೆಗಿರುವ ನಂಬಿಕೆಯೇ ಮುಖ್ಯ. ಇದು ಪತನಗೊಂಡರೆ ನಾಯಕತ್ವದ ಅವನತಿ ಖಂಡಿತ. ವೈಯಕ್ತಿಕವಾಗಿ ಮೋದಿ ಕಳಂಕವನ್ನು ಹೊತ್ತವರಲ್ಲ. ಅಧಿಕಾರ ಎಂದರೆ ಅದು ನೀರಿನ ಮೇಲೆ ಗುಳ್ಳೆ. ಇದು ತನ್ನ ಕೈಯಲ್ಲಿ ಇದ್ದಾಗ ತನ್ನೆಲ್ಲ ಪರಮಾಸೆಗಳನ್ನು ತೀರಿಸಿಕೊಳ್ಳಬೇಕೆಂಬ ಹಪಾಹಪಿಯೂ ಇವರಲ್ಲಿ ಇಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಕುಳಿತಿದ್ದ ದೇಶದ ಪಾರ್ಲಿಮೆಂಟ್‌ನಲ್ಲಿ ಭಾರತೀಯ ಜನತಾ ಪಾರ್ಟಿಯ ಮೆಜಾರಿಟಿಗೆ ಕೊರತೆ ಅಥವಾ ಲೋಪವಾಗದಂತೆ ಪ್ರತಿ ಕ್ಷಣ ಈ ಹಾದಿಯಲ್ಲಿ ಗಂಭೀರವಾಗಿ ಆಲೋಚಿಸುವ ವ್ಯಕ್ತಿಗಳಲ್ಲಿ ಮೋದಿಯೇ ಮೊದಲಿಗರು. ಯಾವಾಗ ಲೋಕಸಭೆಯಲ್ಲಿ ಬಿಜೆಪಿಗೆ ಮೆಜಾರಿಟಿ ಲೋಪಿಸುವುದೋ ಅಂದು ಸಭಾನಾಯಕನ ನಾಯಕತ್ವಕ್ಕೆ ಬಲವಾದ ಪೆಟ್ಟು ಬಿದ್ದಂತೆಯೇ ಸರಿ.

ಜನತೆಯನ್ನು ತಮ್ಮತ್ತ ಸೂಜಿಗಲ್ಲಿನಂತೆ ಆಕರ್ಷಿಸುವ ಶಕ್ತಿ ಮತ್ತು ಸಮ್ಮೋಹಕ ಬಲ ಮೋದಿ ಅವರ ಮುಖದಲ್ಲಿದೆ. ಪ್ರಜಾತಂತ್ರದಲ್ಲಿ ಜನಪ್ರಿಯತೆ ಹೆಚ್ಚಾದಂತೆ ನಾಯಕ, ಸರ್ವಾಧಿಕಾರಿ ಅಥವಾ ನಿರಂಕುಶವಾಗುವ ಸಾಧ್ಯತೆಗಳೂ ಇವೆ. ದೀರ್ಘಕಾಲ ಅಧಿಕಾರದಲ್ಲಿರುವ ಅಥವಾ ಇದ್ದ ಪ್ರಪಂಚದ ಯಾವ ನಾಯಕನೂ ಕೂಡಾ ಕೊನೆಯವರೆಗೆ ಪರಿಶುದ್ಧತೆ ಕಾಪಾಡಿಕೊಂಡು ಬರಲು ಸಾಧ್ಯವಾಗಲಿಲ್ಲ. ದೇಶಕ್ಕೆ ಪಾರ್ಟಿ ಮುಖ್ಯವೋ, ಅಥವಾ ಇಂತಹ ಪಾರ್ಟಿಗೆ ಜೀವ ತುಂಬಿ ಅಧಿಕಾರದಲ್ಲಿರುವಂತೆ ಮಾಡುವ ಜನಪ್ರಿಯ ನಾಯಕ ಮುಖ್ಯವೋ ಎಂಬುದು ಒಗಟಿನ ಪ್ರಶ್ನೆ.

ಈ ದೇಶಕ್ಕೆ ನೆಹರೂ ನಂತರ ಯಾರು ಎಂಬ ಪ್ರಶ್ನೆ ಅರವತ್ತು ವರ್ಷಗಳ ಹಿಂದೆಯೇ ಎದುರಾಗಿತ್ತು. ಮತ್ತೆ ಅದೇ ಪ್ರಶ್ನೆ ದೇಶದ ಮುಂದಿದೆ. ಎಪ್ಪತ್ತಾರನೆ ವರ್ಷಕ್ಕೆ ಕಾಲಿಟ್ಟ ನರೇಂದ್ರ ಮೋದಿ ಬಳಿಕ ಈ ದೇಶಕ್ಕೆ ಯಾರು ಎಂಬುದು. ಇದನ್ನು ತೀರ್ಮಾನಿಸುವುದು ಈ ದೇಶದ ಕಾಲ ಮತ್ತು ಜನತೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

Related Posts

Leave a Reply

Your email address will not be published. Required fields are marked *