ಕಾಂಗ್ರೆಸ್ ಸರ್ಕಾರ ಏನೋ ಸಾಧನೆ ಮಾಡುತ್ತೇವೆ ಎಂದುಕೊಂಡು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮಾಡಿದೆ. ಆದರೆ ಯಾವುದೇ ಯೋಜನೆಗಳು ಕರಾವಳಿಗೆ ಸಿಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಮಾಗಡಿಯಲ್ಲಿ ಬಿಜೆಪಿಯ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಏನೋ ಸಾಧನೆ ಮಾಡುತ್ತೇವೆ ಎಂದುಕೊಂಡು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮಾಡಿದೆ. ಹಿಂದಿನ ಸಿಎಂ ಸಿದ್ದರಾಮಯ್ಯ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ಮಾಡಿ ಐದಾರು ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಏನೂ ಸಾಧನೆಯಾಗಲಿಲ್ಲ. ಈಗ ಮುಖ್ಯಮಂತ್ರಿ ಡಿಕೆಶಿವಕುಮಾರ್ ರೆಸಾರ್ಟ್ಗೆ ಹೋಗಿ ಮೀನು ತಿಂದು ಈಗ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಲಿದೆ. ಹಣವಿದ್ದರೆ ಸಾಲ ಮಾಡದೆ ಬಜೆಟ್ ಮಂಡಿಸುತ್ತೇನೆ ಎಂದು ಹೇಳಬೇಕು. ಈ ಬಾರಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ ಬಜೆಟ್ ಮಂಡಿಸಿ, ಅದರ ಬಡ್ಡಿ ಕಟ್ಟಲು ಕೂಡ ಆಗುತ್ತಿಲ್ಲ. ಸಾರಿಗೆ ನಿಗಮಗಳಿಗೆ 5,000 ಕೋಟಿ ರೂ. ನೀಡಬೇಕಿದೆ. ನೌಕರರಿಗೆ ಸಂಬಳ ಕೂಡ ಕೊಟ್ಟಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಹೆಚ್ಚಳ ಮಾಡಿಲ್ಲ. ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿಲ್ಲ. ಬರಗಾಲ ಬಂದರೂ ಒಂದೊಂದೇ ಘೋಷಣೆ ಮಾಡುತ್ತಿದ್ದಾರೆ. ಎಲ್ಲ ಆದ ಮೇಲೆ ಕೇಂದ್ರಕ್ಕೆ ನಿಯೋಗ ಹೋಗುವುದಾಗಿ ಹೇಳಿದ್ದಾರೆ ಎಂದರು.
ಡಿಕೆಶಿವಕುಮಾರ್ ಸಿಎಂ ಆದ ನಂತರ ಕಮಿಶನ್ ನಿಂತಿಲ್ಲ. ರಾಜ್ಯದಲ್ಲಿ ಮಾತ್ರ ಬರಗಾಲವಿದೆ. ಎಂ ಸ್ಯಾಂಡ್ ತಯಾರಿಸುವ ಕ್ರಶರ್ ಮಾಲೀಕರಿಂದ ತಲಾ ಒಂದು ಕೋಟಿ ರೂ. ಕಮಿಶನ್ ಕೇಳಲಾಗಿದೆ. ಇದರಿಂದಾಗಿ ಕ್ರಶರ್ಗಳು ಸ್ಥಗಿತಗೊಂಡಿವೆ. ಎಲ್ಲ ಕಡೆ ಕಾಮಗಾರಿಗಳು ಸ್ಥಗಿತಗೊಂಡಿದೆ. ಇಂತಹ ಸ್ಥಿತಿಯಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 24,600 ಕೋಟಿ ರೂ. ಹೆಚ್ಚುವರಿಯಾಗಿ ಉಳಿದಿತ್ತು. ಆಗ ಕೊರತೆ ಬಜೆಟ್ ಇರಲಿಲ್ಲ. ಮೂರುವರೆ ವರ್ಷದಲ್ಲಿ ಕೊರತೆ ಬಜೆಟ್ಗಳನ್ನೇ ಮಾಡಲಾಗಿದೆ. ಹಣವಿಲ್ಲದಿದ್ದರೂ ಬೊಗಳೆ ಬಿಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಮಾಡಿದ ಸಚಿವ ಸಂಪುಟ ಸಭೆಯಿಂದ ಏನು ಪ್ರಯೋಜನವಾಗಿದೆ ಎಂದು ಹೇಳಬೇಕು. ಇದು ಕೇವಲ ಘೋಷಣೆಗಳಾಗಿ ಉಳಿಯಲಿದೆ ಎಂದರು.
ಶಿವಕುಮಾರ್ಗೆ ಒಕ್ಕಲಿಗರು ಕೂಡ ಮತ ನೀಡುವುದಿಲ್ಲ ಎಂದು ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ. ಆದರೂ ಮುಂದೆ ನಾನೇ ಸಿಎಂ ಎಂದು ಡಿಕೆಶಿವಕುಮಾರ್ ಹೇಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮಾತು ನಡೆಯುತ್ತಿಲ್ಲ. ಅವರನ್ನು ಬಳಸಿಕೊಂಡು ಈಗ ಬದಿಗೆ ಇರಿಸಲಾಗಿದೆ. ಸಿದ್ದರಾಮಯ್ಯ ಈಗ ಹೊಸ ಮನೆಯಲ್ಲಿ ವಿಶ್ರಾಂತಿ ಗ್ಯಾರಂಟಿ ಸಿಕ್ಕಿದೆ. ಅದೇ ರೀತಿ ಮುಂದೆ ಜನರು ಕಾಂಗ್ರೆಸ್ಗೆ ವಿಶ್ರಾಂತಿ ನೀಡುತ್ತಾರೆ. ರಾಹುಲ್ ಗಾಂಧಿಯವರಿಗೆ ಕರ್ನಾಟಕ ಎಟಿಎಂ ಆಗಿದೆ. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಈ ಸರ್ಕಾರ ಬಿದ್ದುಹೋಗುತ್ತದೆ. ಅಹಿಂದ ಚಳವಳಿ ಜೋರಾದರೆ ಡಿಕೆ ಶಿವಕುಮಾರ್ ಗಂಟು ಮೂಟೆ ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ನಾವು ಹೋರಾಟ ಮಾಡಿದ ಕಾರಣಕ್ಕೆ ಗಣೇಶೋತ್ಸವಕ್ಕೆ ಡಿಜೆ ಗೆ ಅನುಮತಿ ನೀಡಲಾಗುತ್ತಿದೆ. ಎಲ್ಲೇ ತೊಂದರೆಯಾದರೂ ನಾನು ಅಲ್ಲಿಗೆ ಹೋಗಿ ಎಚ್ಚರಿಕೆ ನೀಡುತ್ತೇನೆ. ಉಮರ್ ಖಾಲಿದ್ ದೇಶದ್ರೋಹದ ಕೆಲಸ ಮಾಡಿರುವುದಕ್ಕೆ ಜೈಲಲ್ಲಿದ್ದಾನೆ. ಕಾಂಗ್ರೆಸ್ನವರು ಪಾಕಿಸ್ತಾನದವರನ್ನು ಗೆಳೆಯರು ಎನ್ನುತ್ತಾರೆ. ಕುಕ್ಕರ್ ಬಾಂಬ್ ಹಾಕಿದವನನ್ನು ಬ್ರದರ್ ಎಂದು ಕರೆದಿದ್ದರು. ಇವರಿಂದಾಗಿ ವಿಧಾನಸೌಧದಲ್ಲೂ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿತ್ತು. ಕಾಂಗ್ರೆಸ್ ಯಾರ ಪರ ಎಂದು ಇದರಿಂದಲೇ ತಿಳಿದಿದೆ ಎಂದರು.
ಕೆಪಿಎಸ್ಸಿ ಯುವಜನರ ಬದುಕಿಗೆ ಬೆಂಕಿ ಇಟ್ಟಿದೆ. ಈ ಹಗರಣದಲ್ಲಿ ಬಂಧನಕ್ಕೊಳಗಾದವರು ಯಾರಿಗೆ ಕರೆ ಮಾಡಿದ್ದಾರೆ ಎಂಬ ದಾಖಲೆಗಳಿದ್ದು, ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಯಾವ ಸಚಿವರ ಆಪ್ತ ಸಹಾಯಕರು ಕರೆ ಮಾಡಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ನಮ್ಮ ಹೋರಾಟದಿಂದ ಒಂದು ವಿಕೆಟ್ ಬೀಳಿಸಿದ್ದೇವೆ. ಬಿಜೆಪಿ ನಾಯಕರು ಶಾಮೀಲಾಗಿದ್ದರೆ ಬಂಧನ ಮಾಡಲಿ ಎಂದು ಹೇಳಿದರು.


