Saturday, September 19, 2026
Menu

ಅಧಿಕಾರಿಗಳ ಜೊತೆ ಚರ್ಚಿಸಿ ಕಸ್ತೂರಿ ರಂಗನ್ ವರದಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ: ಸಿಎಂ

ಕಸ್ತೂರಿ ರಂಗನ್ ವರದಿಗೆ ಸಂಬಂಧಿದಂತೆ ಈ ಭಾಗದ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಾಧಕ ಬಾಧಕಗಳ ಕುರಿತು ಶಿವಕುಮಾರ್  ಸ್ಥಳೀಯ ಜನರ ಜೊತೆ ಸಭೆ ನಡೆಸಿ ಮಾತನಾಡಿದರು. ನೀವು ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ಬಗ್ಗೆ ತಿಳಿಸಿದ್ದೀರಿ. ನಿಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದೀರಿ. ನಾವು 27ರ ಒಳಗೆ ನಮ್ಮ ತೀರ್ಮಾನ ಕೇಂದ್ರಕ್ಕೆ ಕಳುಹಿಸಬೇಕು. ನಿಮ್ಮ ಅಭಿಪ್ರಾಯ ನಮ್ಮ ಅಭಿಪ್ರಾಯ ಆಗಬೇಕು ಎಂದು ನಾವು ಇಲ್ಲಿಗೆ ಬಂದಿದ್ದೇವೆ. ನೀವೆಲ್ಲರೂ ಕೇರಳ ಮಾದರಿ ಪ್ರಸ್ತಾಪಿಸಿ, ತಜ್ಞರ ಸಮಿತಿಗೆ ಶಿಫಾರಸ್ಸು ಮಾಡಿದ್ದೀರಿ. ನಿಮ್ಮ ಸಲಹೆಗಳನ್ನು ನಾವು ಸ್ವೀಕರಿಸಿದ್ದು, ಈ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು, ರೈತರು, ಬರಗಾಲ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲಾಗುವುದು. ಸೋಮವಾರ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ವಿಚಾರ ಚರ್ಚೆ ಮಾಡಲಾಗುವುದು. ನಾನು ಶಿವಮೊಗ್ಗ, ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಅಲ್ಲಿನ ಜನರ ಭಾವನೆಯನ್ನು ಆಲಿಸುವೆ ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆಯಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷ ಆಗಿರಬೇಕು ಎಂದು ನಿಯಮವಿದೆ. ಎಲ್ಲರಿಗೂ 25 ವರ್ಷಗಳ ಮಿತಿಯನ್ನು ನಿಗದಿ ಮಾಡಲು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡಬೇಡಿ ಎಂದು ನಾನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವೆ. ಬಗರ್ ಹುಕ್ಕುಂ ಸಾಗುವಳಿ, ಉಳುವವನಿಗೆ ಭೂಮಿ ನೀಡಿರುವುದು ನಮ್ಮ ಸರ್ಕಾರ ಎಂದು ತಿಳಿಸಿದರು.

ಮೀನುಗಾರಿಕೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಮುಖ ತೀರ್ಮಾನ ಮಾಡಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ವಲಯ ನಿರ್ವಹಣೆ ಯೋಜನೆ, ಹೆಬ್ರಿಯಲ್ಲಿ ತಾಲೂಕು ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ನಿಮ್ಮ ಮುಂದೆ ಸುಮ್ಮನೆ ಘೋಷಣೆ ಮಾಡಿ, ನಂತರ ಅದನ್ನು ಮರೆಯುವಂತೆ ಆಗಬಾರದು. ಸಿಕ್ಕ ಅವಕಾಶದಲ್ಲಿ ನಿಮಗೆ ಕೈಲಾದಷ್ಟು ಸೇವೆ ಮಾಡುವೆ. ಮುಂದಿನ ದಿನಗಳಲ್ಲಿ ಉಡುಪಿಗೂ ಬಂದು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುವೆ ಎಂದು ಭರವಸೆ ನೀಡಿದರು.

ತುಳುನಾಡಿನ ಜನ ದೇಶದ ಆಸ್ತಿ. ಮುಂದಿನ ದಿನಗಳಲ್ಲಿ ಮತ್ತೆ ಬಂದು ನಿಮ್ಮ ಸಲಹೆ ಕೇಳುತ್ತೇನೆ. ಅಧಿವೇಶನದಲ್ಲಿ ನಿಮ್ಮ ಪ್ರತಿನಿಧಿಗಳ ಸಲಹೆ ಆಲಿಸುತ್ತೇನೆ. ಈ ಸರ್ಕಾರ ನಿಮ್ಮ ಜೊತೆ ಇದೆ ಎಂದರು. ಈ ಭಾಗದ ಎಲ್ಲಾಪಕ್ಷಗಳ ಶಾಸಕರು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿದ್ದೇವೆ. ಈ ಸಂಪುಟ ಸಭೆಯಲ್ಲಿ 60 ತೀರ್ಮಾನ ಮಾಡಿದ್ದು, ಅದರಲ್ಲಿ 40 ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದರು.

ತುಳುವನ್ನು ಎರಡು ಜಿಲ್ಲೆಗಳಲ್ಲಿ ಎರಡನೇ ಅಧಿಕೃತ ಭಾಷೆ ಎಂದು ತೀರ್ಮಾನ ಮಾಡಿದ್ದೇವೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ, ಅಭಿವೃದ್ಧಿಗೆ ನೀತಿ ರೂಪಿಸಿ ಅನೇಕ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಇದರಿಂದ ಹೂಡಿಕೆ ಆಕರ್ಷಸಿ, ಇಲ್ಲಿನ ಜನ ವಲಸೆ ಹೋಗುವುದನ್ನು ತಪ್ಪಿಸಬೇಕು.ಈ ಭಾಗದ ಜನ ವಿದ್ಯಾವಂತರು, ಪ್ರಜ್ಞಾವಂತರು.  ಈ ಭಾಗದಲ್ಲಿ ಆರಂಭವಾದ ಐದಾರು ಬ್ಯಾಂಕ್ ಗಳು ದೇಶಕ್ಕೆ ಮಾದರಿಯಾಗಿ ಬೆಳೆದವು. ಇಡೀ ದೇಶದಲ್ಲಿ ಅತಿ ಹೆಚ್ಚು ವೈದ್ಯರು ತಯಾರಾಗುವುದು ತುಳುನಾಡಿನಲ್ಲಿ ಎಂದು ತಿಳಿಸಿದರು.

ಸಂವಾದ ಸಭೆಗೂ ಮುನ್ನ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. “ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಭಾವನೆ ತಿಳಿದು, ಅವರಿಂದಲೇ ವಿಚಾರಧಾರೆ ಆಲಿಸಿ ಪರಿಹಾರ ನೀಡಲು ಬಂದಿರುವೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *