ನವ ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ ತಕ್ಕಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದರು.
ಶಿಕ್ಷಣ ನೀತಿಯ ಕುರಿತು ಚರ್ಚಿಸಲು ಕಾಂಗ್ರೆಸ್ ಆಡಳಿತವಿರುವ 4 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದೆಹಲಿಯಲ್ಲಿ ನಿಗದಿಯಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಅದು ರದ್ದಾಯಿತು. ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು. ವಿಶ್ವದ 80ಕ್ಕೂ ಹೆಚ್ಚು ಪ್ರಸಿದ್ಧ ವಿಶ್ವವಿದ್ಯಾಲಯಗಳು ಕರ್ನಾಟಕದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆಸಕ್ತಿ ತೋರುತ್ತಿವೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ ಅದು ಬೆಂಗಳೂರು ಮತ್ತು ಕರ್ನಾಟಕದ ಮೂಲಕವೇ ಸಾಧ್ಯ ಎಂದು ಹೇಳಿದ್ದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಎಂ ಎಸ್ ರಾಮಯ್ಯ ಕುಟುಂಬದ ಕೊಡುಗೆ ತುಂಬಾ ದೊಡ್ಡದು. ರಾಮಯ್ಯ ಅವರು ಬೆಂಗಳೂರು ಮತ್ತು ಕರ್ನಾಟಕ ಬೆಳೆಯಲು ಕೊಡುಗೆ ನೀಡಿದ್ದಾರೆ. ಜಯರಾಂ ಅವರ ಹಾಗೂ ನನ್ನ ಪರಿಚಯ 40 ವರ್ಷಗಳಷ್ಟು ಹಳೆಯದು. ಜಯರಾಂ ಅವರನ್ನು ನಾನು ಗುರು ಎಂದು ಗೌರವಿಸುತ್ತೇನೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಎಂದು ಹೇಳಿದರು.
ಎಂ.ಎಸ್. ರಾಮಯ್ಯ ಸಂಸ್ಥೆಯು ಜೆಎಸ್ಡಬ್ಲ್ಯೂ ಸಮೂಹದ ಸಜ್ಜನ್ ಜಿಂದಾಲ್ ಅವರಂತಹ ಹಲವು ಬೃಹತ್ ಉದ್ಯಮಿಗಳನ್ನು ಮತ್ತು ನಾಯಕರನ್ನು ಸೃಷ್ಟಿಸಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳ ಸಮೂಹ ತುಂಬಾ ದೊಡ್ಡದು. ರಾಮಯ್ಯ ಸಂಸ್ಥೆಯ ಪಕ್ಕದಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಗಲು ಸ್ವಾಮಿ ವಿವೇಕಾನಂದ, ಜಮ್ಶೆಟ್ಜಿ ಟಾಟಾ ಹಾಗೂ ಮೈಸೂರು ಮಹಾರಾಜರ ದೂರದೃಷ್ಟಿ ಕಾರಣ. ವಿವೇಕಾನಂದ ಹಾಗೂ ಜಮ್ಶೆಟ್ಜಿ ಟಾಟಾ ಅವರ ನಡುವಿನ ಸಂವಾದದ ಕಾರಣಕ್ಕೆ ಮಹತ್ವದ ಸಂಸ್ಥೆಗೆ ಮೈಸೂರು ಮಹಾರಾಜರು ಜಾಗ ನೀಡಿದರು ಎಂದರು.
ಪರೋಪಕಾರಾಯ ಫಲಂತಿ ವೃಕ್ಷಾಃ ಶ್ಲೋಕದಂತೆ ಮರ, ನದಿ ಮತ್ತು ಹಸುಗಳು ಹೇಗೆ ತಮಗಾಗಿ ಅಲ್ಲದೆ ಸಮಾಜಕ್ಕಾಗಿ ಬಾಳುತ್ತವೆಯೋ, ಹಾಗೆಯೇ ರಾಮಯ್ಯ ಅವರ ಕುಟುಂಬದ ಆಸ್ತಿ ಮತ್ತು ಜ್ಞಾನವಂತ ಸಮಾಜ ನಿರ್ಮಾಣಕ್ಕೆ ಮುಡಿಪಾಗಿದೆ ಎಂದರು.
ಅಮೆರಿಕನ್ನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ ಕನಿಷ್ಠ 10 ಅಂತಾರಾಷ್ಟ್ರೀಯ ಶಾಲೆಗಳನ್ನು ಕೋರಿದ್ದರು. ಇಂದು ಭಾರತದಲ್ಲಿರುವ 138 ಅಂತಾರಾಷ್ಟ್ರೀಯ ಶಾಲೆಗಳ ಪೈಕಿ 37 ಶಾಲೆಗಳು ಕರ್ನಾಟಕದಲ್ಲೇ ಇವೆ. ಕರ್ನಾಟಕದಲ್ಲಿ ಪ್ರತಿ ವರ್ಷ 20,000 ಇಂಜಿನಿಯರ್ಗಳು ಹಾಗೂ 59 ಮೆಡಿಕಲ್ ಕಾಲೇಜುಗಳಿಂದ 13,940 ವೈದ್ಯರು ಹೊರಬರುತ್ತಿದ್ದಾರೆ. ಜೊತೆಗೆ 1.2 ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಸಿಬ್ಬಂದಿ ತಯಾರಾಗುತ್ತಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ 16 ಲಕ್ಷ (1.6 ಮಿಲಿಯನ್) ಐಟಿ ವೃತ್ತಿಪರರಿದ್ದರೆ, ಬೆಂಗಳೂರು ಒಂದರಲ್ಲೇ 2.6 ಮಿಲಿಯನ್ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಇದು ಬೆಂಗಳೂರಿನ ಹೆಗ್ಗಳಿಕೆ ಎಂದು ಹೇಳಿದರು .
ಫಾಕ್ಸ್ಕಾನ್ ಸಂಸ್ಥೆಯಲ್ಲಿ 50,000 ಯುವ ಸಮೂಹ ಉದ್ಯೋಗ ಮಾಡುತ್ತಿದ್ದಾರೆ. ವಸತಿ, ವಿಮೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅಮೆರಿಕದ ಸುಂಕ ಸಮಸ್ಯೆಯ ನಡುವೆಯೂ ಉದ್ಯಮಿಗಳು ಭಾರತ ಹಾಗೂ ಬೆಂಗಳೂರನ್ನು ಸುರಕ್ಷಿತ ಎಂದು ಭಾವಿಸಿದ್ದಾರೆ ಎಂದರು.
ನ್ಯೂಜಿಲೆಂಡ್ ಗೆ ತೆರಳಿದ್ದಾಗ ನಾನು ಗಮನಿಸಿದ ಸಂಗತಿ ಎಂದರೆ. ಅಲ್ಲಿ ನಮ್ಮ ಪದವಿ ಕೇಳುವುದಿಲ್ಲ. ಬದಲಾಗಿ ಕೌಶಲ್ಯ ಕೇಳುತ್ತಾರೆ. ಕೌಶಲ್ಯ ಶಿಕ್ಷಣ ಪಡೆದು ಈ ದೇಶದ ಏಳಿಗೆಗೆ ಕೊಡುಗೆ ಕೊಡಬೇಕು ಎಂದರು. ನಾನು ಹುಟ್ಟಿನಿಂದ ರೈತ, ವೃತ್ತಿಯಿಂದ ಉದ್ಯಮಿ, ಆಯ್ಕೆಯಿಂದ ಶಿಕ್ಷಣತಜ್ಞ ಹಾಗೂ ಆಸಕ್ತಿಯಿಂದ ರಾಜಕಾರಣಿ. ಆದರೆ ನನ್ನ ಹೃದಯ ಇರುವುದು ಶಿಕ್ಷಣ ಕ್ಷೇತ್ರದಲ್ಲಿ. ಜಯರಾಂ ಅವರೂ ಶಿಕ್ಷಣ ಕ್ಷೇತ್ರಕ್ಕೇ ತಮ್ಮ ಜೀವನ ಮುಡುಪಾಗಿಟ್ಟವರು. ಜಯರಾಂ ಇತಿಹಾಸ ಓದುವವರಲ್ಲ, ಇತಿಹಾಸ ಸೃಷ್ಟಿಸುವವರು ಎಂದು ಬಣ್ಣಿಸಿದರು.


